ADVERTISEMENT

ಗುಜರಾತ್: ದೈಹಿಕ ಪರೀಕ್ಷೆಗೆ ಮಹಿಳೆಯರಿಗೆ ಬೆತ್ತಲಾಗುವಂತೆ ಸೂಚನೆ!

ತನಿಖೆಗೆ ಆದೇಶ ನೀಡಿದ ಸೂರತ್‌ ಮೇಯರ್

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 5:14 IST
Last Updated 22 ಫೆಬ್ರುವರಿ 2020, 5:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್: ಸೂರತ್‌ ಮಹಾನಗರ ಪಾಲಿಕೆಯ ಕ್ಲರ್ಕ್‌ ಟ್ರೈನಿ ಹುದ್ದೆಗೆ ಆಯ್ಕೆಯಾಗಿದ್ದ 100 ಮಹಿಳೆಯರಿಗೆ ದೈಹಿಕ ಪರೀಕ್ಷೆ ನಡೆಸುವ ಸಲುವಾಗಿ ಬೆತ್ತಲೆಯಾಗಿ ನಿಲ್ಲಿಸಿದ ಪ್ರಕರಣ ಗುಜರಾತ್‌ನ ಸೂರತ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಈ ಕುರಿತು ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎ. ಶೇಖ್ ದೂರು ನೀಡಿದ್ದಾರೆ. ಘಟನೆ ಕುರಿತು ಮೇಯರ್ ಜಗದೀಶ್ ಪಟೇಲ್ ಹಾಗೂ ಪಾಲಿಕೆ ಆಯುಕ್ತ ಬಂಚ್ಚಾನಿಧಿ ಪಾನಿ ತನಿಖೆಗೆಆದೇಶ ನೀಡಿದ್ದಾರೆ. ಎರಡು ವಾರಗಳೊಳಗಾಗಿ ತನಿಖೆಯ ವರದಿ ನೀಡುವಂತೆ ಸೂಚಿಸಿದ್ದಾರೆ.

ನಿಯಮಗಳ ಪ್ರಕಾರ, ಟ್ರೈನಿ ಹುದ್ದೆಗಾಗಿ ಮೂರು ವರ್ಷದ ತರಬೇತಿ ಅವಧಿಯ ಬಳಿಕ ನೌಕರರು ತಮ್ಮ ಕೆಲಸಕ್ಕಾಗಿ ದೈಹಿಕ ಸಾಮರ್ಥ್ಯ ಸಾಬೀತುಪಡಿಸಬೇಕು. ಈ ರೀತಿ ದೈಹಿಕ ಪರೀಕ್ಷೆ ನಡೆಸುವ ವೇಳೆ ಸೂರತ್‌ನ ಮುನ್ಸಿಪಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್‌ನ (ಸಿಎಂಐಎಂಇಆರ್) ಮಹಿಳಾ ವೈದ್ಯರು ನೂರು ಮಹಿಳೆಯರನ್ನು ತಲಾ 10 ಗುಂಪುಗಳಾಗಿ ಬೆತ್ತಲೆಯಾಗಿ ನಿಲ್ಲಿಸಿದ್ದರು ಎನ್ನಲಾಗಿದೆ.

ADVERTISEMENT

ಅಷ್ಟೇ ಅಲ್ಲ ವೈದ್ಯೆಯರು, ವಿವಾಹಿತ ಮಹಿಳೆಯರು ಸೇರಿದಂತೆ ಅವಿವಾಹಿತೆಯರಿಗೆ ಸಾಮಾನ್ಯ ಪ್ರಶ್ನೆಗಳನ್ನು ಕೇಳುವ ಬದಲು, ಗರ್ಭಧಾರಣೆ ಸಂಬಂಧಿಸಿದ ವೈಯಕ್ತಿಕ ಹಾಗೂ ಅಸಂಬದ್ಧ ಪ್ರಶ್ನೆಗಳನ್ನು ಕೇಳಿದ್ದರು ಎಂದು ಪರೀಕ್ಷೆಗೊಳಗಾದ ಮಹಿಳೆಯರು ಆರೋಪಿಸಿದ್ದಾರೆ.

ದೈಹಿಕ ಪರೀಕ್ಷೆ ಕುರಿತು ಪುರುಷ ನೌಕರರು ಯಾವುದೇ ದೂರುನೀಡಿಲ್ಲ. ಆದರೆ, ಮಹಿಳೆಯರು ತಮ್ಮನ್ನು ನಡೆಸಿಕೊಂಡ ರೀತಿಗೆ ಆಕ್ಷೇಪ ವ್ಯಕ್ತಪಡಿಸಿ ನೌಕರರ ಸಂಘಕ್ಕೆ ದೂರು ಸಲ್ಲಿಸಿದ್ದಾರೆ ಎಂದು ಸಂಘ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.