ADVERTISEMENT

ಸಚಿವ ನಾರಾಯಣ ರಾಣೆಗೆ ಬಂಧನದಿಂದ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 3:31 IST
Last Updated 26 ಆಗಸ್ಟ್ 2021, 3:31 IST
ನಾರಾಯಣ ರಾಣೆ ಅವರು ಬುಧವಾರ ಮುಂಬೈನ ತಮ್ಮ ನಿವಾಸದಲ್ಲಿ ಮಾಧ್ಯಮ ಗೋಷ್ಠಿ ನಡೆಸಿದರು    -ಪಿಟಿಐ ಚಿತ್ರ
ನಾರಾಯಣ ರಾಣೆ ಅವರು ಬುಧವಾರ ಮುಂಬೈನ ತಮ್ಮ ನಿವಾಸದಲ್ಲಿ ಮಾಧ್ಯಮ ಗೋಷ್ಠಿ ನಡೆಸಿದರು    -ಪಿಟಿಐ ಚಿತ್ರ   

ಮುಂಬೈ (ಪಿಟಿಐ): ‘ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕೆನ್ನೆಗೆ ಬಾರಿಸುತ್ತಿದ್ದೆ’ ಎಂದಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು, ನಾಸಿಕ್‌ನಲ್ಲಿ ದಾಖಲಾದ ಪ್ರಕರಣದಲ್ಲಿ ಬಂಧಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರವು ಬಾಂಬೆ ಹೈಕೋರ್ಟ್‌ಗೆ ಹೇಳಿದೆ.

ನಾಸಿಕ್‌ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆ ನೀಡಿ ಎಂದು ರಾಣೆ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‌ಗೆ ಸರ್ಕಾರವು ಹೀಗೆ ಪ್ರಮಾಣಪತ್ರ ಸಲ್ಲಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 17ರಂದು ನಡೆಯಲಿದ್ದು, ಅಲ್ಲಿಯವರೆಗೆ ಮಾತ್ರವೇ ಈ ರಕ್ಷಣೆ ಅನ್ವಯವಾಗಲಿದೆ.

ಸರ್ಕಾರದ ಪ್ರಮಾಣಪತ್ರವನ್ನು ಪರಿಶೀಲಿಸಿದ ಪೀಠವು, ‘ತನಿಖೆಗೆ ಸಹಕರಿಸಬೇಕು. ಪೊಲೀಸರು ನೋಟಿಸ್ ನೀಡಿರುವಂತೆ ಸೆಪ್ಟೆಂಬರ್ 2ರಂದು ತನಿಖಾಧಿಕಾರಿ ಎದುರು ನಾಸಿಕ್‌ನಲ್ಲಿ ಹಾಜರಾಗಬೇಕು’ ಎಂದು ರಾಣೆ ಅವರಿಗೆ ಸೂಚನೆ ನೀಡಿದೆ.

ADVERTISEMENT

‘ರಾಯಗಡ ಮತ್ತು ಮಹಾಡ್‌ನಲ್ಲಿ ದಾಖಲಾಗಿರುವ ಪ್ರಕರಣಗಳಿಂದಲೂ ರಕ್ಷಣೆ ನೀಡಬೇಕು' ಎಂದು ರಾಣೆ ಪರ ವಕೀಲರು ಮನವಿ ಮಾಡಿಕೊಂಡರು. ಹೈಕೋರ್ಟ್ ಪೀಠವು ಅದನ್ನು ನಿರಾಕರಿಸಿತ್ತು.

‘ನಾಸಿಕ್ ಪ್ರಕರಣದಲ್ಲಿ ಅವರನ್ನು ಬಂಧಿಸುವುದಿಲ್ಲ ಎಂದು ಸರ್ಕಾರ ಹೇಳಿದೆ. ಮಹಾಡ್‌ ಮತ್ತು ರಾಯಗಡ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಅರ್ಜಿದಾರರು, ತಮ್ಮ ಅರ್ಜಿಯನ್ನು ತಿದ್ದುಪಡಿ ಮಾಡಬೇಕು’ ಎಂದು ಪೀಠವು ಸೂಚನೆ ನೀಡಿತು.

ರಾಣೆಗೆ ಎಚ್ಚರಿಕೆ

ರಾಣೆ ಅವರಿಗೆ ಜಾಮೀನು ನೀಡಿದ ರತ್ನಗಿರಿ ಜಿಲ್ಲಾ ನ್ಯಾಯಾಲಯವು, ‘ಮತ್ತೆ ಹೀಗೆ ಆಗದಂತೆ ಎಚ್ಚರವಹಿಸಿ’ ಎಂದು ಎಚ್ಚರಿಕೆ ನೀಡಿದೆ.

‘ಬಂಧನದ ಕಾರಣ ಮತ್ತು ಇತರ ಕಾರಣಗಳನ್ನು ಪರಿಗಣಿಸಿದರೆ, ಬಂಧನವು ನ್ಯಾಯಬದ್ಧವಾಗಿದೆ. ಆದರೆ ರಾಣೆ ವಿರುದ್ಧ ಪ್ರಕರಣದಲ್ಲಿ ದಾಖಲಿಸಲಾಗಿರುವ ಐಪಿಸಿ ಸೆಕ್ಷನ್‌ಗಳು ಜೀವಾವಧಿ ಅಥವಾ ಮರಣ ದಂಡನೆ ವಿಧಿಸಬಹುದಾದ ಸೆಕ್ಷನ್‌ಗಳಲ್ಲ’ ಎಂದು ಜಿಲ್ಲಾ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ‘ಮುಂದೆ ಇಂತಹ ತಪ್ಪು ಮಾಡಬೇಡಿ ಮತ್ತು ತನಿಖೆಗೆ ಸಹಕರಿಸಿ’ ಎಂದು ರಾಣೆ ಅವರಿಗೆ ಎಚ್ಚರಿಕೆ ನೀಡಿದೆ.

ಠಾಕ್ರೆಯನ್ನು ಬಂಧಿಸಿ ಬಿಜೆಪಿ ಆಗ್ರಹ

‘ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಉದ್ಧವ್ ಠಾಕ್ರೆ ತಮ್ಮ ಪಕ್ಷದ ಕಾರ್ಯಕರ್ತರನ್ನು ಪ್ರಚೋದಿಸಿದ್ದರು. ಅವರ ವಿರುದ್ಧವೂ ಎಫ್‌ಐಆರ್ ದಾಖಲಿಸಿ’ ಎಂದು ಯವತ್ಮಾಳ್ ಜಿಲ್ಲಾ ಬಿಜೆಪಿ ಅಧ್ಯಕ್ಷ ನಿತಿನ್ ಬುಟಾಡಾ ಒತ್ತಾಯಿಸಿದ್ದಾರೆ.

2020ರ ಅಕ್ಟೋಬರ್‌ನಲ್ಲಿ ನಡೆದಿದ್ದ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಉದ್ಧವ್ ಠಾಕ್ರೆ ಅವರು, ‘ಛತ್ರಪತಿ ಶಿವಾಜಿ ಅವರಿಗೆ ಅವಮಾನ ಮಾಡಿದ ಯೋಗಿ ಅವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು’ ಎಂದು ಆಗ್ರಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾರಾದರೂ ಇಂತಹ ಹೇಳಿಕೆ ನೀಡಿದ್ದರೆ, ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗುತ್ತಿತ್ತು. ಹಿಂದಿನ ಬಿಜೆಪಿ ಸರ್ಕಾರ ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಮಾಡಿದ್ದೂ ಇದನ್ನೆ..

ಸಾಮ್ನಾ, ಶಿವಸೇನಾ ಮುಖವಾಣಿ

ಕೇಂದ್ರ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದವರೆಲ್ಲರೂ, ನಂತರ ಮುಖ್ಯಮಂತ್ರಿ ಠಾಕ್ರೆ ಅವರನ್ನು ಭೇಟಿ ಮಾಡಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿರುವ ಈ ಸರ್ಕಾರವನ್ನು ಕಿತ್ತೊಗೆಯಬೇಕು.

ನಿತೀಶ್ ರಾಣೆ, ನಾರಾಯಣ ರಾಣೆ ಅವರ ಪುತ್ರ ಮತ್ತು ಶಾಸಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.