ADVERTISEMENT

ಎಲ್ಲರಿಗೂ SIR ನಮೂನೆ ಸಿಗುವವರೆಗೆ ನಾನು ಅರ್ಜಿ ಭರ್ತಿ ಮಾಡಲ್ಲ: ಮಮತಾ ಬ್ಯಾನರ್ಜಿ

ಅನಿರ್ಬನ್ ಭೌಮಿಕ್
Published 7 ನವೆಂಬರ್ 2025, 5:27 IST
Last Updated 7 ನವೆಂಬರ್ 2025, 5:27 IST
<div class="paragraphs"><p>ಮಮತಾ ಬ್ಯಾನರ್ಜಿ</p></div>

ಮಮತಾ ಬ್ಯಾನರ್ಜಿ

   

– ಪಿಟಿಐ ಚಿತ್ರ

ಕೋಲ್ಕತ್ತ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿಯಿಂದ ಹಲವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ಪಶ್ಚಿಮ ಬಂಗಾಳದಾದ್ಯಂತ ವರದಿಯಾಗಿವೆ. ಇದರ ಬೆನ್ನಲ್ಲೇ, ರಾಜ್ಯದ ಪ್ರತಿಯೊಬ್ಬರಿಗೂ ಎಸ್‌ಐಆರ್‌ ಗಣತಿ ನಮೂನೆ ಅರ್ಜಿ ತಲುಪುವವರೆಗೂ ತಾವು ಅರ್ಜಿ ಭರ್ತಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ADVERTISEMENT

ಪಶ್ಚಿಮ ಬಂಗಾಳದಾದ್ಯಂತ 294 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಎಸ್‌ಐಆರ್ ನಡೆಸಲು 80,681 ಮಂದಿ ಬೂತ್‌ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ಚುನಾವಣಾ ಆಯೋಗ ನಿಯೋಜಿಸಿದೆ.

ಕೋಲ್ಕತ್ತದ ಕಾಲಿಘಾಟ್‌ನಲ್ಲಿರುವ ಮಮತಾ ಅವರ ನಿವಾಸಕ್ಕೆ ಬುಧವಾರ (ನವೆಂಬರ್ 5) ತೆರಳಿದ್ದ ಅಧಿಕಾರಿಗಳು ಗಣತಿ ನಮೂನೆ ಅರ್ಜಿ ವಿತರಿಸಿದ್ದಾರೆ. ಆದರೆ, ಮಮತಾ ಅವರೇ ಸ್ವತಃ ಅರ್ಜಿಗಳನ್ನು ಸ್ವೀಕರಿಸಿದ್ದಾರೆ ಎಂದು ಕೆಲವೆಡೆ ವರದಿಯಾಗಿದೆ. ಅದನ್ನು ಅಲ್ಲಗಳೆದಿರುವ ಸಿಎಂ, 'ಮಾಧ್ಯಮಗಳು ಮಾಡಿರುವ ವರದಿಗಳು ಸಂಪೂರ್ಣ ಸುಳ್ಳು, ದಾರಿ ತಪ್ಪಿಸುವ ಹಾಗೂ ದುರುದ್ದೇಶ ಪೂರಿತವಾದವು' ಎಂದು ಪ್ರತಿಕ್ರಿಯಿಸಿದ್ದಾರೆ.

'ತಮಗೆ ವಹಿಸಲಾದ ಕೆಲಸ ಮಾಡುವ ಸಲುವಾಗಿ ಬಿಎಲ್‌ಒ ನಮ್ಮ ನಿವಾಸಕ್ಕೆ ಬಂದಿದ್ದರು. ನಿವಾಸದಲ್ಲಿ ಎಷ್ಟು ಮಂದಿ ಇದ್ದಾರೆ ಎಂಬುದನ್ನು ನಿವಾಸದ ಕಚೇರಿಯಲ್ಲಿ ವಿಚಾರಿಸಿ, ಅರ್ಜಿಗಳನ್ನು ಕೊಟ್ಟು ಹೋಗಿದ್ದಾರೆ' ಎಂದು ಫೇಸ್‌ಬುಕ್‌ನಲ್ಲಿ ಗುರುವಾರ ಬರೆದುಕೊಂಡಿದ್ದಾರೆ.

ಮುಂದುವರಿದು, 'ನಾನು ಯಾವುದೇ ಅರ್ಜಿಯನ್ನು ಭರ್ತಿ ಮಾಡಿಲ್ಲ. ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯೂ ಈ ಅರ್ಜಿಗಳನ್ನು ಭರ್ತಿ ಮಾಡುವವರೆಗೆ, ನಾನೂ ಮಾಡುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಎಸ್‌ಐಆರ್‌ ನಡೆಸುವುದಾಗಿ ಚುನಾವಣಾ ಆಯೋಗ ಘೋಷಣೆ ಮಾಡಿದಾಗಿನಿಂದ, ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕದಿಂದ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ ಹೆಚ್ಚಿನವರು ಆತ್ಮಹತ್ಯೆ ಮಾಡಿಕೊಂಡು, ಕೆಲವರು ಭಯದಿಂದ ಸಾವಿಗೀಡಾಗಿದ್ದಾರೆ ಎಂದು ಟಿಎಂಸಿ ನಾಯಕರು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡಲು ಚುನಾವಣಾ ಆಯೋಗ ಯೋಜಿಸಿದೆ. ಅದರಂತೆ, ನೈಜ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟು, ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಮಮತಾ ಹಾಗೂ ಅವರ ಪಕ್ಷ ದೂರಿದೆ.

ಎಸ್‌ಐಆರ್‌ ಪ್ರಕ್ರಿಯೆಯನ್ನು ವಿರೋಧಿಸಿ ಮಮತಾ ಹಾಗೂ ಅವರ ಉತ್ತರಾಧಿಕಾರಿ ಅಭಿಷೇಕ್‌ ಬ್ಯಾನರ್ಜಿ ನೇತೃತ್ವದಲ್ಲಿ ಆಡಳಿತ ಪಕ್ಷವಾದ ತೃಣಮೂಲ ಕಾಂಗ್ರೆಸ್‌ ವತಿಯಿಂದ ಕೋಲ್ಕತ್ತದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.