ಐ–ಪ್ಯಾಕ್
ಚಿತ್ರ: ಎಕ್ಸ್
ನವದೆಹಲಿ: ಜಾರಿ ನಿರ್ದೆಶನಾಲಯದ ತನಿಖೆಗೆ ಸಂಪೂರ್ಣ ಸಹಕಾರ ನೀಡಿರುವುದಾಗಿ ರಾಜಕೀಯ ಸಲಹಾ ಸಂಸ್ಥೆ ‘ಇಂಡಿಯನ್ ಪೊಲಿಟಿಕಲ್ ಆ್ಯಕ್ಷನ್ ಕಮಿಟಿ’(ಐ–ಪ್ಯಾಕ್) ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಗುರುವಾರ ಕೋಲ್ಕತ್ತದಲ್ಲಿರುವ ಸಂಸ್ಥೆಯ ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು.
‘ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಯುವಜನತೆ ಪಕ್ಷಾತೀತವಾಗಿ ಪಾಲ್ಗೊಂಡಾಗ ದೇಶದ ರಾಜಕೀಯ ವ್ಯವಸ್ಥೆ ಬಲಗೊಳ್ಳುತ್ತದೆ ಎಂಬ ನಂಬಿಕೆಯೊಂದಿಗೆ ದಶಕದ ಹಿಂದೆ ಐ–ಪ್ಯಾಕ್ ಸಂಸ್ಥೆಯನ್ನು ಕಟ್ಟಲಾಯಿತು. ಸಣ್ಣದಾಗಿ ಪ್ರಾರಂಭವಾದ ಸಂಸ್ಥೆ ಇಂದು ರಾಜಕೀಯ ವಲಯದಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡಿದೆ’ ಎಂದು ಹೇಳಿದೆ.
‘ಈವರೆಗೆ ನಮ್ಮ ಸಂಸ್ಥೆ ಬಿಜೆಪಿ, ಕಾಂಗ್ರೆಸ್, ಎಎಪಿ, ತೃಣಮೂಲ ಕಾಂಗ್ರೆಸ್, ಡಿಎಂಕೆ, ವೈಎಸ್‌ಆರ್ ಕಾಂಗ್ರೆಸ್, ಟಿಆರ್‌ಎಸ್(ಈಗಿನ ಬಿಆರ್‌ಎಸ್), ಜೆಡಿಯು, ಶಿವಸೇನಾ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳ ಜೊತೆ ಕೆಲಸ ಮಾಡಿದೆ. ಸಂಸ್ಥೆಯ ಯಾರೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ, ರಾಜಕೀಯ ಹುದ್ದೆಯನ್ನೂ ಹೊಂದಿಲ್ಲ. ನಾವು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದು, ವೃತ್ತಿಪರತೆಯಿಂದ ಕೂಡಿದೆ. ರಾಜಕೀಯ ಸಿದ್ದಾಂತಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದಿದೆ.
‘ಗುರುವಾರ ಇ.ಡಿ ಅಧಿಕಾರಿಗಳು ಕೋಲ್ಕತ್ತದಲ್ಲಿರುವ ನಮ್ಮ ಕಚೇರಿ ಮತ್ತು ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸದಲ್ಲಿ ಶೋಧ ನಡೆಸಿದ್ದಾರೆ. ನಮ್ಮಂತಹ ವೃತ್ತಿಪರ ಸಂಸ್ಥೆಗೆ ಇದು ದುರದೃಷ್ಟಕರ ದಿನವಾಗಿತ್ತು. ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದ್ದು ಕಳವಳಕ್ಕೂ ಕಾರಣವಾಗಿತ್ತು. ಏನೇ ಇರಲಿ, ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡಿದ್ದೇವೆ. ಕಾನೂನನ್ನು ಗೌರವಿಸುತ್ತೇವೆ’ ಎಂದು ಹೇಳಿದೆ.
‘ಯಾವುದೇ ಅಡೆತಡೆಗಳನ್ನು ಎದುರಿಸಿದರೂ ನಮ್ಮ ಕೆಲಸವನ್ನು ಪಾರದರ್ಶಕವಾಗಿ, ವೃತ್ತಿಪರತೆಯಿಂದ ಮಾಡುವುದನ್ನು ಮುಂದುವರಿಸುತ್ತೇವೆ’ ಎಂದು ತಿಳಿಸಿದೆ.