ADVERTISEMENT

ವಿಶ್ವ ನಗರಗಳ ಶೃಂಗ: ಸಿಂಗಪುರಕ್ಕೆ ಹೋಗಲು ಬಿಡಿ- ಪಿಎಂಗೆ ಕೇಜ್ರಿವಾಲ್‌ ಪತ್ರ

ಸಿಂಗಪುರದಲ್ಲಿ ಆಗಸ್ಟ್‌ ತಿಂಗಳ ಮೊದಲ ವಾರ ನಡೆಯಲಿರುವ ವಿಶ್ವ ನಗರಗಳ ಶೃಂಗ

ಪಿಟಿಐ
Published 17 ಜುಲೈ 2022, 11:12 IST
Last Updated 17 ಜುಲೈ 2022, 11:12 IST
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌   

ನವದೆಹಲಿ: ವಿಶ್ವ ನಗರಗಳ ಶೃಂಗದಲ್ಲಿ ಪಾಲ್ಗೊಳ್ಳಲು ತ್ವರಿತವಾಗಿ ಅನುಮತಿ ನೀಡುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಪತ್ರ ಬರೆದಿದ್ದಾರೆ.

ಸಿಂಗಪುರದಲ್ಲಿ ನಡೆಯಲಿರುವ ಶೃಂಗದಲ್ಲಿ ಪಾಲ್ಗೊಳ್ಳಲು ಅನುಮತಿಗಾಗಿ ಕಳೆದ ಒಂದು ತಿಂಗಳಿನಿಂದ ಕಾಯಲಾಗುತ್ತಿದೆ. ಅಲ್ಲಿ ನಗರಗಳ ಅಭಿವೃದ್ಧಿ ಕುರಿತಾಗಿ ಭಾಷಣ ಮಾಡಬೇಕಿದೆ ಎಂದು ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ. ತಮ್ಮ ಈ ಭೇಟಿಯು ರಾಷ್ಟ್ರಕ್ಕೆ ಹೆಮ್ಮೆಯನ್ನು ತರುತ್ತದೆ ಎಂದಿದ್ದಾರೆ.

ಆಗಸ್ಟ್‌ ತಿಂಗಳ ಮೊದಲ ವಾರ ನಡೆಯಲಿರುವ ವಿಶ್ವ ನಗರಗಳ ಶೃಂಗಕ್ಕೆ ಅರವಿಂದ ಕೇಜ್ರಿವಾಲ್‌ ಅವರನ್ನು ಸಿಂಗಪುರದ ಹೈಕಮಿಷನರ್‌ ಸೈಮನ್‌ ವಾಂಗ್‌ ಆಹ್ವಾನಿಸಿದ್ದಾರೆ. ಕಾರ್ಯಕ್ರಮದ ಮೊದಲ ದಿನ ಪಾಲ್ಗೊಳ್ಳಲು ಅವಕಾಶ ಕೋರಿ ಲೆಫ್ಟಿನೆಂಟ್‌ ಗವರ್ನರ್‌ಗೆ ದೆಹಲಿ ಸಿಎಂ ಮನವಿ ಮಾಡಿದ್ದಾರೆ.

ADVERTISEMENT

'ಸಿಂಗಪುರಕ್ಕೆ ಹೋಗಲು ನನಗೆ ಅನುಮತಿ ಪತ್ರ ಸಿಗದಿರುವುದು ಬೇಸರವನ್ನುಂಟು ಮಾಡಿದೆ. ಮನವಿ ಮಾಡಿ 5 ವಾರಗಳೇ ಕಳೆದಿವೆ. ಜೂನ್‌ 7ರಂದು ನಾನು ಮನವಿ ಪತ್ರವನ್ನು ಬರೆದಿದ್ದೆ. ಆದರೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪ್ರಮುಖ ಸಭೆಯೊಂದರಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಯನ್ನು ತಡೆಯುತ್ತಿರುವುದು ಸರಿಯಲ್ಲ' ಎಂದು ಕೇಜ್ರಿವಾಲ್‌ ಪತ್ರದಲ್ಲಿ ತಿಳಿಸಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪತ್ನಿ ಮೆಲನಿಯಾ ಟ್ರಂಪ್‌ ಅವರು ದೆಹಲಿಯ ಶಿಕ್ಷಣ ವ್ಯವಸ್ಥೆಯನ್ನು ಶ್ಲಾಘಿಸಿದ್ದನ್ನು ಪತ್ರದಲ್ಲಿ ಸ್ಮರಿಸಿರುವ ಕೇಜ್ರಿವಾಲ್‌, ಇದರಿಂದ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯಾಗಿದೆ ಎಂದಿದ್ದಾರೆ.

ದೆಹಲಿಯ ಮೊಹಲ್ಲಾ ಕ್ಲಿನಿಕ್‌ಗಳಿಗೆ ವಿಶ್ವಸಂಸ್ಥೆ ಮಾಜಿ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ಮತ್ತು ನಾರ್ವೆಯ ಮಾಜಿ ಪ್ರಧಾನಿ ಗ್ರೊ ಹರ್ಲೆಮ್‌ ಬ್ರಂಟ್‌ಲ್ಯಾಂಡ್‌ ಅವರು ಭೇಟಿ ನೀಡಿರುವುದನ್ನು ಕೇಜ್ರಿವಾಲ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಉಭಯ ಪ್ರಮುಖರು ಮೊಹಲ್ಲಾ ಕ್ಲಿನಿಕ್‌ ವ್ಯವಸ್ಥೆಯನ್ನು ಇಡೀ ವಿಶ್ವವೇ ಅಳವಡಿಸಿಕೊಳ್ಳಬೇಕು ಎಂದಿದ್ದರು. ಇದು ರಾಷ್ಟ್ರಕ್ಕೆ ಹೆಮ್ಮೆಯನ್ನುಂಟು ಮಾಡುವ ಸಂಗತಿ. ಇದರಿಂದ ದೆಹಲಿಯ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯು ವಿಶ್ವದ ಮೇಲೆ ಪ್ರಭಾವ ಬೀರಿದೆ ಎಂದು ವಿವರಿಸಿದ್ದಾರೆ.

ಸಿಂಗಪುರದಲ್ಲಿ ದೆಹಲಿ ಮಾದರಿ ಬಗ್ಗೆ ಭಾಷಣ ಮಾಡಲಿದ್ದೇನೆ. ಇಲ್ಲಿನ ಶಿಕ್ಷಣ, ಆಸ್ಪತ್ರೆಗಳು, ಮೊಹಲ್ಲಾ ಕ್ಲಿನಿಕ್‌ಗಳು ಮತ್ತು ಉಚಿತ ವಿದ್ಯುತ್‌ ಯೋಜನೆ ಬಗ್ಗೆ ವಿಶ್ವಕ್ಕೆ ತಿಳಿಸಲಿದ್ದೇನೆ. ಈ ಕುರಿತು ವಿಶ್ವದ ದೊಡ್ಡ ನಾಯಕರು ಶ್ಲಾಘಿಸಲಿದ್ದಾರೆ. ನನ್ನ ಸಿಂಗಪುರ ಪ್ರವಾಸದಿಂದ ಭಾರತದ ಹೆಗ್ಗಳಿಗೆ ವೃದ್ಧಿಸುತ್ತದೆ ಎಂದು ಕೇಜ್ರಿವಾಲ್‌ ಪತ್ರದಲ್ಲಿ ಹೇಳಿದ್ದಾರೆ.

ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ನಿಮಗೆ ಅಮೆರಿಕಕ್ಕೆ ಹೋಗಲು ವೀಸಾ ನಿರಾಕರಿಸಲಾಗಿತ್ತು. ಆಗ ಇಡೀ ರಾಷ್ಟ್ರವೇ ನಿಮ್ಮ ಪರವಾಗಿ ವಾದಿಸಿತ್ತು. ಅಮೆರಿಕದ ನಿರ್ಧಾರವನ್ನು ಖಂಡಿಸಿತ್ತು. ಇವತ್ತು ನೀವು ಒಬ್ಬ ಮುಖ್ಯಮಂತ್ರಿಯನ್ನು ಪ್ರಮುಖ ಸಭೆಯೊಂದಕ್ಕೆ ಹೋಗುವುದನ್ನು ತಡೆಯುತ್ತಿದ್ದೀರಿ. ಇದು ರಾಷ್ಟ್ರದ ಹಿತಾರ್ಥಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.

ಕೇಜ್ರಿವಾಲ್‌ ಅವರ ಸಿಂಗಪುರ ಪ್ರವಾಸಕ್ಕೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೆನಾ ಅವರು ಇನ್ನೂ ಅನುಮತಿಯನ್ನು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.