ಲಂಡನ್: 2025ನೇ ಸಾಲಿನ ‘ಜಗತ್ತಿನ ಅತ್ಯುತ್ತಮ ಶಾಲೆ ಪ್ರಶಸ್ತಿ’ಗಾಗಿ ವಿವಿಧ ವಿಭಾಗಗಳಲ್ಲಿ ಅಗ್ರ 10ರ ಪಟ್ಟಿಯನ್ನು ಬುಧವಾರ ಪ್ರಕಟಿಸಲಾಗಿದೆ. ಈ ಪಟ್ಟಿಗಳಲ್ಲಿ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಏಕ್ಯಾ ಶಾಲೆ ಸೇರಿ ಹರಿಯಾಣ, ಮಹಾರಾಷ್ಟ್ರ, ಉತ್ತರ ಪ್ರದೇಶದ ಒಟ್ಟು ನಾಲ್ಕು ಶಾಲೆಗಳು ಸ್ಥಾನ ಪಡೆದಿವೆ.
ಬ್ರಿಟನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಟಿ4 ಶಿಕ್ಷಣ ಸಂಸ್ಥೆಯು 2022ರಿಂದ ಈ ಪ್ರಶಸ್ತಿಯನ್ನು ನೀಡಲು ಆರಂಭಿಸಿದೆ.
ಸಮುದಾಯದ ಒಳಗೊಳ್ಳುವಿಕೆ, ಪರಿಸರ ಸ್ನೇಹಿ ಕ್ರಮ, ನವೀನತೆ/ಅನ್ವೇಷಣೆ, ಪ್ರತಿಕೂಲ ಸ್ಥಿತಿಯ ಸಮರ್ಥ ನಿರ್ವಹಣೆ, ಆರೋಗ್ಯಕರ ಜೀವನಶೈಲಿಯನ್ನು ಬೆಂಬಲಿಸುವುದು –ಹೀಗೆ ಐದು ಪ್ರತ್ಯೇಕ ವಿಭಾಗಗಳಲ್ಲಿ ವಿಜೇತ ಶಾಲೆಗಳ ಆಯ್ಕೆ ನಡೆಯಲಿದೆ.
ಏಕ್ಯಾ ಶಾಲೆಯು ನಾವೀನ್ಯತೆ/ ಅನ್ವೇಷಣೆ’ ವಿಭಾಗದಲ್ಲಿ ಜಗತ್ತಿನ ಅತ್ಯುತ್ತಮ ಶಾಲೆ ಪ್ರಶಸ್ತಿಯ ಅಗ್ರ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದು ಸ್ವತಂತ್ರ ಕಿಂಡರ್‌ಗಾರ್ಡನ್, ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ಹೊಂದಿದೆ. ಇದು ವಿದ್ಯಾರ್ಥಿಗಳ ನವೀನ ಚಿಂತನೆಗೆ ಉತ್ತೇಜನ ನೀಡುತ್ತದೆ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ರೀತಿಯಲ್ಲಿ ಯೋಚಿಸಲು ಹಾಗೂ ಕೌಶಲಗಳನ್ನು ಕಲಿಯಲು ಹೆಚ್ಚು ಆದ್ಯತೆ ನೀಡುತ್ತದೆ.
ವಿಜೇತ ಶಾಲೆಗಳ ಹೆಸರುಗಳನ್ನು ಅಕ್ಟೋಬರ್‌ನಲ್ಲಿ ಘೋಷಿಸಲಾಗುತ್ತದೆ. ನಂತರ ಅಬುಧಾಬಿಯಲ್ಲಿ ನವೆಂಬರ್ 15 ಮತ್ತು 16ರಂದು ನಡೆಯಲಿರುವ ‘ವಿಶ್ವದ ಶಾಲೆಗಳ ಶೃಂಗ’ಕ್ಕೆ ವಿಜೇತರನ್ನು ಆಹ್ವಾನಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.