ADVERTISEMENT

ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ಗಾರ್ಡ್‌ ಕೆಲಸ: ವಿಜಯವರ್ಗೀಯ ವಿವಾದ

ಪಿಟಿಐ
Published 19 ಜೂನ್ 2022, 19:15 IST
Last Updated 19 ಜೂನ್ 2022, 19:15 IST
ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಸ್‌ ವಿಜಯವರ್ಗೀಯ
ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಸ್‌ ವಿಜಯವರ್ಗೀಯ   

ಇಂದೋರ್ :ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರು ‘ಅಗ್ನಿಪಥ’ ಯೋಜನೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ನೀಡಿದ ಹೇಳಿಕೆಗೆ ವಿವಿಧ ವಲಯಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ.

‘ಬಿಜೆಪಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಪ್ರಸಂಗ ಬಂದರೆ, ಅಗ್ನಿವೀರರಿಗೆ ನಾನು ಆದ್ಯತೆ ನೀಡುತ್ತೇನೆ’ ಎಂದು ವಿಜಯವರ್ಗೀಯ ಅವರು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾನುವಾರ ಹೇಳಿದರು. ಅವರು ನೀಡಿದ ಈ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.‌

‘ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ‘ಸೆಕ್ಯುರಿಟಿ ಗಾರ್ಡ್’ ಕೆಲಸ ನೀಡುವುದಾಗಿ ವಿಜಯವರ್ಗೀಯ ಹೇಳಿದ್ದಾರೆ. 2019ರಲ್ಲಿ ಬಿಜೆಪಿ ಆರಂಭಿಸಿದ್ದ ‘ನಾನೂ ಚೌಕಿದಾರ’ ಅಭಿಯಾನದ ಅರ್ಥ ಏನು ಎಂಬುದು ಈಗ ಸ್ಪಷ್ಟಗೊಂಡಿದೆ’ ಎಂದು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಹೇಳಿದ್ದಾರೆ.

ADVERTISEMENT

ಬಿಜೆಪಿ ಮುಖಂಡ ವರುಣ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ರಾಜಕೀಯ ಮುಖಂಡರು ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಜಯವರ್ಗೀಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಕ್ಷಣಾ ಪಡೆಗಳನ್ನು ಅಪಮಾನಿಸಿದ ವಿಜಯವರ್ಗೀಯ ಕ್ಷಮೆ ಕೇಳಬೇಕು ಎಂದು ಮಧ್ಯಪ್ರದೇಶ ಕಾಂಗ್ರೆಸ್ ಘಟಕ ಆಗ್ರಹಿಸಿದೆ.

ತಮ್ಮ ಹೇಳಿಕೆಗೆ ವ್ಯಕ್ತವಾದ ತೀವ್ರ ಟೀಕೆಗೆ ಸ್ಪಷ್ಟನೆ ನೀಡಲು ಯತ್ನಿಸಿದ ವಿಜಯವರ್ಗೀಯ ಅವರು, ಇದರ ಹಿಂದೆ ಟೂಲ್‌ಕಿಟ್ ತಂಡ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ‘ಅಗ್ನಿವೀರರು ತಮ್ಮ ಸೇವಾವಧಿ ಪೂರ್ಣಗೊಳಿಸಿದ ಬಳಿಕ ಅವರ ಸೇವೆಯನ್ನು ಯಾವ ಕ್ಷೇತ್ರದಲ್ಲಿ ಬೇಕಾದರೂ ಬಳಸಿಕೊಳ್ಳಬಹುದು ಎಂಬ ಅರ್ಥದಲ್ಲಿ ನಾನು ಹೇಳಿಕೆ ನೀಡಿದ್ದೆ’ ಎಂದು ಸ್ಪಷ್ಟನೆ ನೀಡಲು ಯತ್ನಿಸಿದ್ದಾರೆ.

‘ನಾಲ್ಕು ವರ್ಷಗಳ ಸೇವಾವಧಿ ಪೂರ್ಣಗೊಳಿಸಿ ಹೊರಬರುವ ಅಗ್ನಿವೀರರಿಗೆ ₹11 ಲಕ್ಷ ಹಣದ ಜೊತೆಗೆ ಅಗ್ನಿವೀರ ಎಂಬ ಪಟ್ಟ ಸಿಗುತ್ತದೆ. ತರಬೇತಿಯ ಅವಧಿಯಲ್ಲಿಅಗ್ನಿವೀರರಲ್ಲಿ ಶಿಸ್ತು, ವಿಧೇಯತೆ ಮೊದಲಾದ ಗುಣಗಳು ಬೆಳೆಯುತ್ತವೆ. ಇದು ಸೇನಾ ತರಬೇತಿಯ ಭಾಗವೂ ಹೌದು. ಸೇನಾ ತರಬೇತಿಯಲ್ಲಿ ಶಿಸ್ತಿಗೆ ಮೊದಲ ಸ್ಥಾನವಿದ್ದರೆ, ಆದೇಶಗಳನ್ನು ಪಾಲಿಸುವುದು ಎರಡನೇ ಕರ್ತವ್ಯವಾಗಿರಲಿದೆ’ ಎಂದು ವಿಜಯವರ್ಗೀಯ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.

‘ಇದು ದೇಶದ ನಿರುದ್ಯೋಗಿ ಯುವಕರು ಹಾಗೂ ಸೇನಾಪಡೆಯ ಶೌರ್ಯಕ್ಕೆ ಮಾಡಿದ ದೊಡ್ಡ ಅಪಮಾನ. ಬಿಜೆಪಿ ಕ್ಷಮೆ ಕೇಳಬೇಕು’ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಮಾಧ್ಯಮ ಮುಖ್ಯಸ್ಥ ಕೆ.ಕೆ. ಮಿಶ್ರಾ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಸತ್ಯಾಗ್ರಹ

‘ನಕಲಿ ದೇಶಭಕ್ತರು ಯಾರೆಂದು ಯುವಜನರು ತಿಳಿದುಕೊಳ್ಳಬೇಕು’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಾನುವಾರ ಹೇಳಿದರು. ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆಸಿದ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು,‘ನಿಮಗಿಂತ ಉತ್ತಮ ದೇಶಭಕ್ತರು ಇಲ್ಲ. ಕಣ್ಣು ತೆರೆಯಿರಿ, ನಕಲಿ ದೇಶಭಕ್ತರು ಮತ್ತು ನಕಲಿ ರಾಷ್ಟ್ರೀಯವಾದಿಗಳು ಯಾರು ಎಂದು ತಿಳಿಯಿರಿ. ಅಗ್ನಿಪಥದ ವಿರುದ್ಧದ ಹೋರಾಟದಲ್ಲಿ ಇಡೀ ದೇಶ ಮತ್ತು ಕಾಂಗ್ರೆಸ್‌ ನಿಮ್ಮ ಜೊತೆ ಇದೆ’ ಎಂದರು.

ಕವಿ ಹರಿವಂಶರಾಯ್ ಬಚ್ಚನ್‌ ಅವರ ಹಿಂದಿ ಪದ್ಯ ‘ಅಗ್ನಿಪಥ್‌’ದ ಕೆಲ ಸಾಲುಗಳನ್ನು ಅವರು ಓದಿದರು. ಅಖಿಲ ಭಾರತ ಪ್ರದೇಶ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಪಕ್ಷದ ಹಿರಿಯ ನಾಯಕರಾದ ಅಧೀರ್ ರಂಜನ್‌ ಚೌಧರಿ, ಹರೀಶ್‌ ರಾವತ್‌, ಜೈರಾಂ ರಮೇಶ್‌, ಸಲ್ಮಾನ್‌ ಖುರ್ಷಿದ್‌, ಸಚಿನ್‌ ಪೈಲಟ್‌, ದೀಪೇಂದರ್‌ ಹೂಡ, ಅಜಯ್‌ ಮಾಕನ್‌ ಮುಂತಾದವರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಯೋಜನೆ ವಿರೋಧಿಸಿ ಸೋಮವಾರವೂ ಪಕ್ಷದ ಪ್ರತಿಭಟನೆ ಮುಂದುವರಿಯಲಿದೆ.

‘ಡ್ರೈವರ್, ಪ್ಲಂಬರ್ ಕೆಲಸ’

ಅಗ್ನಿವೀರರು ಸೇನೆಯಿಂದ ಹೊರಬಂದ ಬಳಿಕ ಅವರಿಗೆ ವಾಹನ ಚಾಲನೆ, ಎಲೆಕ್ಟ್ರಿಷಿಯನ್, ಪ್ಲಂಬಿಂಗ್ ಹಾಗೂ ಕ್ಷೌರಿಕರ ತರಬೇತಿ ನೀಡಲಾಗುವುದು ಎಂದು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರು ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರತಿಪಕ್ಷಗಳು ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ‘ಸೇನಾಪಡೆಗಳು ಈಗ ತರಬೇತಿ ಕೇಂದ್ರಗಳಾಗುತ್ತಿವೆ. ಚಾಲಕರು, ಎಲೆಕ್ಟ್ರಿಷಿಯನ್ ಮೊದಲಾದ ಕೌಶಲ ತರಬೇತಿ ಪಡೆದ ಕಾರ್ಮಿಕರನ್ನು ದೇಶಕ್ಕೆ ನೀಡಲಾಗುತ್ತದೆ. ಇದು ಹೊಸ ಸಾಧನೆ’ ಎಂದು ಶಿವಸೇನಾ ನಾಯಕಿ ಹಾಗೂ ಸಂಸದೆ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

***

ಸದುದ್ದೇಶದಿಂದ ತರುವ ಹಲವು ಯೋಜನೆಗಳು ರಾಜಕೀಯ ಬಣ್ಣ ಪಡೆಯುತ್ತಿವೆ. ಮಾಧ್ಯಮಗಳೂ ಟಿಆರ್‌ಪಿಗಾಗಿ ಇವುಗಳಲ್ಲಿ ತೊಡಗಿಸಿಕೊಂಡಿರುವುದು ದುರದೃಷ್ಟ

-ನರೇಂದ್ರ ಮೋದಿ,ಪ್ರಧಾನಿ

ಭಾರತೀಯ ಸೇನೆಯು ತಾಯಿ ಭಾರತಿಯ ಸೇವೆಗೆ ಇರುವುದು. ಅದು ಒಂದು ಕೆಲಸವಲ್ಲ. ನಮ್ಮ ಯೋಧರ ಪರಾಕ್ರಮವನ್ನು ಪದಗಳಲ್ಲಿ ವರ್ಣಿಸಲಾಗದು. ಅವರ ಶೌರ್ಯ ಎಲ್ಲೆಡೆ ಪ್ರತಿಧ್ವನಿಸುತ್ತದೆ

-ವರುಣ್ ಗಾಂಧಿ,ಬಿಜೆಪಿ ಸಂಸದ

ಯೋಧರು, ಯುವಜನತೆಗೆ ಈ ಮಟ್ಟಕ್ಕೆ ಅಗೌರವ ಸರಿಯಲ್ಲ. ದೇಶಸೇವೆ ಮಾಡಲು ಯುವಕರು ದೈಹಿಕ ಅಭ್ಯಾಸ ನಡೆಸಿ, ಪರೀಕ್ಷೆ ಬರೆಯುತ್ತಾರೆಯೇ ಹೊರತು ಬಿಜೆಪಿ ಕಚೇರಿಯ ಹೊರಗಡೆ ಕಾವಲು ಕಾಯುವುದಕ್ಕಲ್ಲ

-ಅರವಿಂದ ಕೇಜ್ರಿವಾಲ್,ದೆಹಲಿ ಮುಖ್ಯಮಂತ್ರಿ

ಉದ್ಯೋಗ ನೀಡುವ ಹುಸಿ ಭರವಸೆಯನ್ನು ಪದೇ ಪದೇ ನೀಡುವ ಮೂಲಕ ಯುವ ಜನರು ನಿರುದ್ಯೋಗದ ಅಗ್ನಿಪಥದಲ್ಲಿ ನಡೆಯುವಂತೆ ಮಾಡಲಾಗಿದೆ. 8 ವರ್ಷಗಳಲ್ಲಿ 16 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಯುವ ಜನರಿಗೆ ಪಕೋಡ ಮಾಡಲು ಕಲಿಸಲಾಗಿದೆ

-ರಾಹುಲ್‌ ಗಾಂಧಿ,ಕಾಂಗ್ರೆಸ್‌ ಸಂಸದ

ಬಡತನ, ಹಣದುಬ್ಬರ, ನಿರುದ್ಯೋಗ ಮತ್ತು ಉದ್ವಿಗ್ನತೆಯ ಅಗ್ನಿಪಥದಲ್ಲಿ ಯುವ ಜನರು ನಡೆಯುವಂತೆ ಮಾಡಲಾಗಿದೆ. ಅಗ್ನಿಪಥ ಯೋಜನೆಯು ಅವರು ನಿರಾಶೆ ಮತ್ತು ಹತಾಶೆಗೊಳ್ಳುವಂತೆ ಮಾಡಿದೆ

-ಮಾಯಾವತಿ,ಬಿಎಸ್‌ಪಿ ಮುಖ್ಯಸ್ಥೆ

ಇದು (ಅಗ್ನಿಪಥ) ವಿದ್ಯಾವಂತ ಯುವಜನರಿಗಾಗಿ ರೂಪಿಸಿದ ನರೇಗಾದಂತಹ ಉದ್ಯೋಗ ಖಾತರಿ ಯೋಜನೆಯೇ ಅಥವಾ ಇದರ ಹಿಂದೆ ಆರ್‌ಎಸ್‌ಎಸ್‌ನ ಗೋಪ್ಯ ಕಾರ್ಯಸೂಚಿ ಇದೆಯೇ?

-ತೇಜಸ್ವಿ ಯಾದವ್‌,ಆರ್‌ಜೆಡಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.