ನವದೆಹಲಿ: ಮಣಿಪುರದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ವೈ. ಖೇಮಚಂದ್ ಸಿಂಗ್ ಅವರು ಮಂಗಳವಾರ ಆಯ್ಕೆಯಾಗಿದ್ದು, ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಕುಕಿ ಸಮುದಾಯದ ಮಹಿಳಾ ನಾಯಕಿ, ಮಾಜಿ ಸಚಿವೆ ನೆಮ್ಚಾ ಕಿಪ್ಗೆನ್ ಅವರು ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಈಶಾನ್ಯದ ರಾಜ್ಯದಲ್ಲಿ ಜನರಿಂದ ಚುನಾಯಿತವಾದ ಸರ್ಕಾರ ಮರುಸ್ಥಾಪನೆಗೊಳಿಸುವ ಪ್ರಕ್ರಿಯೆಗೆ ಚಾಲನೆ ಲಭಿಸಿದೆ. ಮಣಿಪುರದಲ್ಲಿ 2025ರ ಫೆಬ್ರವರಿ 13ರಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ.
ಪಕ್ಷದ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಖೇಮಚಂದ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು. ಎನ್‌ಡಿಎ ಮೈತ್ರಿಕೂಟದ ಎಲ್ಲ ಪಕ್ಷಗಳ ಶಾಸಕರ ಸಭೆ ಶೀಘ್ರ ನಡೆಯಲಿದ್ದು, ಅಲ್ಲಿ ಖೇಮಚಂದ್ ಮತ್ತು ಕಿಪ್ಗೆನ್ ಅವರ ಹೆಸರುಗಳನ್ನು ಅನುಮೋದಿಸುವ ನಿರೀಕ್ಷೆಯಿದೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರದ ವೀಕ್ಷಕ ತರುಣ್ ಚುಘ್ ಮತ್ತು ಈಶಾನ್ಯ ರಾಜ್ಯಗಳ ಉಸ್ತುವಾರಿ ಸಂಬಿತ್ ಪಾತ್ರಾ ಸೇರಿದಂತೆ ಇತರರು ಭಾಗವಹಿಸಿದರು.
ಜನರಿಂದ ಆಯ್ಕೆಯಾಗಿರುವ ಸರ್ಕಾರವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್, ಮೈತೇಯಿ ಮತ್ತು ಕುಕಿ ಸಮುದಾಯದ ಶಾಸಕರು, ಮಿತ್ರಪಕ್ಷಗಳಾದ ಎನ್‌ಪಿಎಫ್ ಹಾಗೂ ಎನ್‌ಪಿಪಿ ಪಕ್ಷಗಳ ಶಾಸಕರ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
60 ಸದಸ್ಯಬಲದ ಮಣಿಪುರ ವಿಧಾನಸಭೆಯಲ್ಲಿ ಸದ್ಯ ಬಿಜೆಪಿಯ 37 ಶಾಸಕರಿದ್ದಾರೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 32 ಸ್ಥಾನಗಳನ್ನು ಗೆದ್ದಿತ್ತು. ಆರು ಸ್ಥಾನಗಳನ್ನು ಗೆದ್ದಿರುವ ಜೆಡಿಯುನ ಐವರು ಶಾಸಕರು ಆ ಬಳಿಕ ಬಿಜೆಪಿಗೆ ಪಕ್ಷಾಂತರಗೊಂಡರು.
ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಕಳೆದ ವರ್ಷ ಫೆಬ್ರುವರಿ 9ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಾದ ನಾಲ್ಕು ದಿನಗಳ ನಂತರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿದೆ. ಅಲ್ಲದೆ, ರಾಜ್ಯ ವಿಧಾನಸಭೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿರಿಸಲಾಗಿದೆ. ರಾಷ್ಟ್ರಪತಿ ಆಳ್ವಿಕೆಯ ಎರಡನೇ ಅವಧಿ ಫೆಬ್ರುವರಿ 12ರಂದು ಕೊನೆಗೊಳ್ಳಲಿದೆ.
ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷಕ್ಕೆ 2023ರ ಮೇ ತಿಂಗಳಿನಿಂದ ಇದುವರೆಗೆ 260 ಮಂದಿ ಬಲಿಯಾಗಿದ್ದಾರೆ. ಸಂಘರ್ಷದಿಂದ ಸಾವಿರಾರು ಮಂದಿ ನಿರ್ವಸಿತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.