ನವದೆಹಲಿ: ‘ಯಮುನಾ ನದಿಗೆ ಬಿಜೆಪಿ ವಿಷ ಬೆರೆಸಿದೆ’ ಎಂದು ಆರೋಪಿಸಿರುವ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್, ತಮ್ಮ ಹೇಳಿಕೆಯನ್ನು ವಾಪಸ್ ಪಡೆಯುವುದಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.
‘ದೆಹಲಿಯ ಜನರು ವಿಷ ಮಿಶ್ರಿತ ನೀರು ಕುಡಿದು ಸಾಯಲು ಬಿಡುವುದಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರ ಯುಮುನಾ ನದಿಗೆ ವಿಷ ಬೆರೆಸುತ್ತಿದೆ ಎಂದು ಕೇಜ್ರಿವಾಲ್ ಸೋಮವಾರ ಆರೋಪಿಸಿದ್ದರು. ನೆರೆ ರಾಜ್ಯದಿಂದ ಸರಬರಾಜಾಗುವ ನೀರಿನಲ್ಲಿ ಅಮೋನಿಯಾ ಎಂಬ ವಿಷವನ್ನು ಬೆರೆಸಲಾಗಿದೆ ಎಂದು ದೆಹಲಿ ಜಲಮಂಡಳಿ ಸಿಇಒ ಖಚಿತಪಡಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದರು.
ಕೇಜ್ರಿವಾಲ್ ಹೇಳಿಕೆಯನ್ನು ಅಲ್ಲಗೆಳೆದಿರುವ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಕ್ಷಮೆಯಾಚಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದರು.
‘ಈ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅತಿಶಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.
‘ಈ ವಿಚಾರದಲ್ಲಿ ರಾಜಕೀಯ ಸಲ್ಲದು. ಇದು ಪಾಪದ ಕೆಲಸವಾಗಿದೆ. ಜನರ ಶಾಪ ನಿಮಗೆ ತಟ್ಟದೇ ಇರುವುದಿಲ್ಲ’ ಎಂದು ನಯಾಬ್ ಸಿಂಗ್ ಸೈನಿ ವಿರುದ್ಧ ಕಿಡಿಕಾರಿದ್ದಾರೆ.
‘ನನ್ನ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಅವರು(ಬಿಜೆಪಿ) ನನಗೆ ಬೆದರಿಕೆ ಹಾಕುತ್ತಿದ್ದಾರೆ. ನನ್ನನ್ನು ಜೈಲಿಗೆ ಕಳುಹಿಸಿದ್ದಾರೆ. ಈಗ ನನ್ನನ್ನು ಗಲ್ಲಿಗೇರಿಸುತ್ತಾರೆಯೇ?’ ಎಂದು ಕೇಳಿದರು.
‘ಕಾನೂನು ಕ್ರಮಗಳ ಬಗ್ಗೆ ನನಗೆ ಯಾವುದೇ ಭಯವಿಲ್ಲ. ದೆಹಲಿ ಜನರು ಕೊಳಕು, ವಿಷ ಮಿಶ್ರಿತ ನೀರು ಕುಡಿದು ಸಾಯಲು ಬಿಡುವುದಿಲ್ಲ’ ಎಂದು ಹೇಳಿದರು.
ಕೊಳಕು ರಾಜಕಾರಣದಿಂದ ಬಿಜೆಪಿ ದೂರವಿರಬೇಕು ಎಂದು ಆಗ್ರಹಿಸಿದ ಅವರು, ಯುಮುನಾ ನದಿಗೆ ಶುದ್ಧ ನೀರು ಬಿಡುವಂತೆ ಹರಿಯಾಣ ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ.
ಏತನ್ಮಧ್ಯೆ, ಕೇಜ್ರಿವಾಲ್ ಆರೋಪವನ್ನು ದೆಹಲಿ ಜಲಮಂಡಳಿ ಸಿಇಒ ಶಿಲ್ಪಾ ಶಿಂದೆ ತಳ್ಳಿಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.