ADVERTISEMENT

ಕಾಶಿಯ ಬೃಹತ್ ಯತಿಸಮಾವೇಶ, ಸೌಂದರ್ಯಲಹರೀ ಪಾರಾಯಣ ಸಂಪನ್ನ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 21:08 IST
Last Updated 27 ಮಾರ್ಚ್ 2022, 21:08 IST
ಕಾಶಿಯಲ್ಲಿ ಬೃಹತ್ ಯತಿಸಮಾವೇಶ
ಕಾಶಿಯಲ್ಲಿ ಬೃಹತ್ ಯತಿಸಮಾವೇಶ   

ಕಾಶಿ: ಶಂಕರಾಚಾರ್ಯರ ಉಪದೇಶಗಳನ್ನು ದೇಶಾದ್ಯಂತ ತಲುಪಿಸುವ ಉದ್ದೇಶದಿಂದ ವೇದಾಂತಭಾರತಿಯ ಸಂರಕ್ಷಕರಾದ ಶಂಕರಭಾರತೀ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶ್ರೀ ಶಂಕರಾಚಾರ್ಯ ವಾಙ್ಮಯ ಸೇವಾ ಪರಿಷತ್ತಿನ ಆಶ್ರಯದಲ್ಲಿ ವಾರಾಣಸಿಯಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಸಾಧು-ಸಂತರ ಸಮಾವೇಶ ಭಾನುವಾರ ಸಂಪನ್ನಗೊಂಡಿತು.

ವಾರಾಣಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಆಚಾರ್ಯ ಮಹಾಮಂಡಲೇಶ್ವರರು, ಮಹಾಮಂಡಲೇಶ್ವರರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಸಾಧುಸಂತರು ಭಾಗವಹಿಸಿದ್ದರು. ಅಲ್ಲಿ, ಮುಖ್ಯವಾದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಇದಾದ ನಂತರ ಮಧ್ಯಾಹ್ನ 3ರಿಂದ 5ಗಂಟೆಯವರೆಗೆ ನಡೆದ ಸಭಾಕಾರ್ಯಕ್ರಮದಲ್ಲಿ ಸಾಧುಸಂತರ ಸಮ್ಮುಖದಲ್ಲಿ ಶಂಕರಾಚಾರ್ಯ ವಿರಚಿತ ಸೌಂದರ್ಯಲಹರಿ ಸ್ತೋತ್ರವನ್ನು ಸಾಮೂಹಿಕವಾಗಿ ಪಾರಾಯಣ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಈ ಎರಡು ದಿನಗಳ ಕಾರ್ಯಕ್ರಮಕ್ಕೆ ಶುಭಹಾರೈಸಿ ಕಳುಹಿಸಿದ್ದ ಸಂದೇಶವನ್ನು ಈ ಸಂದರ್ಭದಲ್ಲಿ ವಾಚನ ಮಾಡಲಾಯಿತು.

ಕರ್ನಾಟಕದಿಂದ ಕಾಶಿಗೆ ಆಗಮಿಸಿದ್ದ ಹಲವಾರು ಮಾತೆಯರು ಕಳೆದ 15ದಿನಗಳಿಂದ ಕಾಶಿಯ ಅನೇಕ ವಿದ್ಯಾಲಯಗಳು, ವಿಶ್ವವಿದ್ಯಾಲಯ, ಧರ್ಮಸಂಸ್ಥೆಗಳಿಗೆ ತೆರಳಿ ಸೌಂದರ್ಯಲಹರಿಯನ್ನು ಪಾಠ ಮಾಡಿದ್ದರು. ಆ ಎಲ್ಲ ವಿದ್ಯಾಲಯಗಳ ವಿದ್ಯಾರ್ಥಿಗಳು, ಮಾತೆಯರು, ಶಿಕ್ಷಕರು ಮುಂತಾದವರು ಸುಮಾರು ಹತ್ತುಸಾವಿರಸಂಖ್ಯೆಯಲ್ಲಿ ಭಾಗವಹಿಸಿ ಸಾಮೂಹಿಕವಾಗಿ ಸೌಂದರ್ಯಲಹರಿ ಪಾರಾಯಣ ಮಾಡಿದರು.

ADVERTISEMENT

ಸಾಧುಸಂತರ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳು

ನಮ್ಮ ಆಶ್ರಮ ಧರ್ಮ ಪಾಲಿಸುತ್ತಾ ನಮ್ಮ ಸಂಸ್ಥೆಗಳ ಕರ್ತವ್ಯವನ್ನೂ ಮಾಡುತ್ತಾ ಸಮಾಜದಲ್ಲಿ ದೌರ್ಬಲ್ಯ ತಲೆ ಎತ್ತದಂತೆ ನೋಡಿಕೊಳ್ಳಬೇಕು. ಸದಾ ಸಬಲ ಸಮಾಜವಾಗಿಯೇ ಉಳಿಯುವಂತೆ ಮಾಡಬೇಕು.

ಧಾರ್ಮಿಕ ಆಚರಣೆಯ ಜೊತೆಗೆ ಆಧ್ಯಾತ್ಮಿಕ ವಿಚಾರಗಳನ್ನು ಜನತೆಗೆ ತಲುಪಿಸಬೇಕು.

ಅಯೋಧ್ಯೆಯಲ್ಲಿ ನಿರ್ಮಿಸಲಿರುವ ಶಂಕರರ ಧ್ಯಾನಮಂದಿರ ಹಾಗೂ ಸಂಶೋಧನ ಕೇಂದ್ರವು ಸರ್ವಾತ್ಮಭಾವವನ್ನು ಸಾರುವ ಪ್ರಧಾನ ಕೇಂದ್ರ ಆಗುವಂತೆ ಎಲ್ಲ ಪ್ರಯತ್ನವನ್ನು ಮಾಡುವುದು.

ಸರ್ವಾತ್ಮಭಾವವನ್ನು ಸಾರುವ ಶಂಕರರ ಸ್ತೋತ್ರಾದಿ ಉಪದೇಶಗಳನ್ನು ದೇಶಾದ್ಯಂತ ತಿಳಿಸುವ ಎಲ್ಲ ಕಾರ್ಯಗಳನ್ನು ಯಶಸ್ವಿಗೊಳಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.