ADVERTISEMENT

ವಿಶ್ವ ಯೋಗ ದಿನ| ಕೋವಿಡ್‌ ವಿರುದ್ಧದ ಭಾರತದ ಹೋರಾಟದಲ್ಲಿ ಯೋಗ ಆಶಾಕಿರಣ: ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 2:27 IST
Last Updated 21 ಜೂನ್ 2021, 2:27 IST
ಯೋಗ ದಿನದ ಅಂಗವಾಗಿ ದೇಶವನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ
ಯೋಗ ದಿನದ ಅಂಗವಾಗಿ ದೇಶವನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ    

ನವದೆಹಲಿ:‘ಇಡೀ ಜಗತ್ತು ಕೋವಿಡ್‌ ವಿರುದ್ಧ ಹೋರಾಡುತ್ತಿರುವ ಈ ಹೊತ್ತಿನಲ್ಲಿ ಯೋಗ ಭರವಸೆಯ ಅಶಾಕಿರಣವಾಗಿದೆ. ಸಾಂಕ್ರಾಮಿಕ ಅವಧಿಯಲ್ಲಿ ಯೋಗ ಕಡೆಗಿನ ಜನರ ಉತ್ಸಾಹ ಕಡಿಮೆಯಾಗಿಲ್ಲ. ಕೋವಿಡ್‌ ವಿರುದ್ಧದ ರಕ್ಷಣೆಗಾಗಿ ವೈದ್ಯರೂ ಯೋಗದ ಮೊರೆ ಹೋಗಿದ್ದಾರೆ,‘ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ವಿಶ್ವ ಯೋಗ ದಿನ. ‘ಸ್ವಾಸ್ಥ್ಯಕ್ಕಾಗಿ ಯೋಗ‘ ಎಂಬುದು ಈ ಬಾರಿಯ ಯೋಗ ದಿನದ ವಸ್ತುವಿಷಯ.

ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಸ್ವಾಸ್ಥ್ಯಕ್ಕಾಗಿ ಯೋಗ‘ ಎಂಬ ಈ ಬಾರಿಯ ಯೋಗದ ವಸ್ತು ವಿಷಯವು ಜನರನ್ನು ಯೋಗ ಮಾಡಲು ಮತ್ತಷ್ಟು ಪ್ರೋತ್ಸಾಹಿಸಿದೆ. ಪ್ರತಿ ದೇಶ, ಪ್ರದೇಶ ಮತ್ತು ಜನರು ಆರೋಗ್ಯವಾಗಿರಬೇಕೆಂದು ನಾನು ಯೋಗ ದಿನದ ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಹೇಳಿದರು.

ADVERTISEMENT

ವೈದ್ಯಕೀಯ ವಿಜ್ಞಾನವೂ ಈಗ ಚಿಕಿತ್ಸೆಯ ಜೊತೆಗೆ, ರೋಗ ಗುಣಪಡಿಸುವ ಪ್ರಕ್ರಿಯೆಯತ್ತ ಒತ್ತು ನೀಡುತ್ತಿದೆ. ಗುಣಪಡಿಸುವ ಪ್ರಕ್ರಿಯೆಯಲ್ಲಿ ಯೋಗ ಸಹಾಯ ಮಾಡುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಯೋಗವನ್ನು ರಕ್ಷಾಕವಚವಾಗಿ ಪರಿಗಣಿಸಿದ್ದಾರೆ. ವೈದ್ಯರು, ದಾದಿಯರು ರೋಗಿಗಳಿಗೆ ಯೋಗವನ್ನು ಕಲಿಸುತ್ತಾ, ಅನುಲೋಮ ವಿಲೋಮ ವ್ಯಾಯಾಮ ಮಾಡಿಸುವ ಚಿತ್ರಗಳನ್ನು ನಾವು ನೋಡಿದ್ದೇವೆ. ಈ ವ್ಯಾಯಾಮಗಳು ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತವೆ ಎಂದು ಅಂತರರಾಷ್ಟ್ರೀಯ ತಜ್ಞರು ಹೇಳಿದ್ದಾರೆ ಎಂದು ಮೋದಿ ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆ ಸಹಯೋಗದೊಂದಿಗೆ ಭಾರತ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಎಂ-ಯೋಗ ಅಪ್ಲಿಕೇಶನ್ ಬರಲಿದ್ದು, ಇದು ವಿಶ್ವದಾದ್ಯಂತ ಜನರಿಗೆ ವಿವಿಧ ಭಾಷೆಗಳಲ್ಲಿ ಯೋಗ ತರಬೇತಿ ವೀಡಿಯೊಗಳನ್ನು ಒದಗಿಸಲಿದೆ ಎಂದು ಮೋದಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.