ADVERTISEMENT

ಮಥುರಾದಲ್ಲಿ ಮಾಂಸ, ಮದ್ಯ ಮಾರಾಟ ನಿಷೇಧಿಸಿದ ಯೋಗಿ ಆದಿತ್ಯನಾಥ್

ಪಿಟಿಐ
Published 30 ಆಗಸ್ಟ್ 2021, 17:00 IST
Last Updated 30 ಆಗಸ್ಟ್ 2021, 17:00 IST
 ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಮುಖ್ಯಮಂತ್ರಿ
ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಮುಖ್ಯಮಂತ್ರಿ    

ಮಥುರಾ: ಕೃಷ್ಣನ ಜನ್ಮಸ್ಥಳ ಮಥುರಾದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣ ನಿಷೇಧಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ.

‘ನಿಷೇಧಕ್ಕೆ ಯೋಜನೆಗಳನ್ನು ರೂಪಿಸಲು ಹಾಗೂ ಅಂತಹ ಚಟುವಟಿಕೆಗಳಲ್ಲಿ ತೊಡಗಿರುವ ಜನರನ್ನು ಗುರುತಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ’ ಎಂದು ಅವರು ಹೇಳಿದರು.

ಮಥುರಾದಲ್ಲಿ ಕೃಷ್ಣೋತ್ಸವ 2021 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ಯ ಮತ್ತು ಮಾಂಸ ವ್ಯಾಪಾರದಲ್ಲಿ ತೊಡಗಿರುವವರು ಮಥುರಾ ವೈಭವವನ್ನು ಮರುಕಳಿಸುವ ಸಲುವಾಗಿ ಹಾಲಿನ ಮಾರಾಟವನ್ನು ಆರಂಭಿಸಬಹುದು ಎಂದು ಸಲಹೆ ನೀಡಿದರು. ಹಾಲಿನ ಉತ್ಪಾದನೆ ಮೂಲಕ ಹೆಸರಾಗಿರುವ ಮಥುರಾದಲ್ಲಿ ಹಾಲಿನ ವ್ಯಾಪಾರ ಉತ್ತಮವಾದುದ್ದಾಗಿದೆ ಎಂದು ಅವರು ಹೇಳಿದರು.

ADVERTISEMENT

ಇದೇವೇಳೆ, ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ಸೋಂಕನ್ನು ತೊಡೆದು ಹಾಕುವಂತೆ ಶ್ರೀಕೃಷ್ಣನನ್ನು ಆದಿತ್ಯನಾಥ್ ಪ್ರಾರ್ಥಿಸಿದರು.

‘ಯಮುನಾ ತಟದಲ್ಲಿ ಬ್ರಿಜ್ ಭೂಮಿಯನ್ನು ಅಭಿವೃದ್ಧಿಪಡಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಮತ್ತು ಇದಕ್ಕಾಗಿ ಯಾವುದೇ ಹಣದ ಕೊರತೆ ಇರುವುದಿಲ್ಲ. ನಾವು ಈ ಪ್ರದೇಶದ ಅಭಿವೃದ್ಧಿಯಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯ ಮಿಶ್ರಣವನ್ನು ಮಾಡಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

ದೇಶಕ್ಕೆ ಹೊಸ ದಿಕ್ಕು ತೋರಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅವರು ಅಭಿನಂದಿಸಿದರು.

ಬಹಳ ಹಿಂದಿನಿಂದಲೂ ನಿರ್ಲಕ್ಷಿಸಲ್ಪಟ್ಟ ಧಾರ್ಮಿಕ ನಂಬಿಕೆಯ ಸ್ಥಳಗಳು ಈಗ ಪುನರುಜ್ಜೀವನಗೊಳ್ಳುತ್ತಿವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.