ಲಖನೌ: ಸನಾತನ ಧರ್ಮಕ್ಕೆ ‘ಇಸ್ಲಾಂ ರಾಜಕೀಯ’ ದೊಡ್ಡ ಅಪಾಯ; ಜನರ ಬ್ರಿಟೀಷ್ ಹಾಗೂ ಫ್ರೆಂಚ್ ವಸಾಹತುಶಾಹಿ ಬಗ್ಗೆ ಮಾತನಾಡಿದರು, ಆದರೆ ದೇಶದಲ್ಲಿ ಇಸ್ಲಾಂ ರಾಜಕೀಯ ಬಗ್ಗೆ ಯಾರೂ ಚರ್ಚೆ ಮಾಡಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.
ಶತಮಾನೋತ್ಸವದ ಅಂಗವಾಗಿ ಗೋರಖಪುರದಲ್ಲಿ ಆರ್ ಎಸ್ ಎಸ್ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಹಲಾಲ್ ಪ್ರಮಾಣಿತ ವಸ್ತುಗಳನ್ನು ಖರೀದಿ ಮಾಡಬೇಡಿ ಎಂದು ಇದೇ ವೇಳೆ ಅವರು ಜನರಿಗೆ ಕರೆ ನೀಡಿದರು. ಅದರಿಂದ ಬಂದ ಹಣದಿಂದ ಮತಾಂತರ, ಲವ್ ಜಿಹಾದ್ ಹಾಗೂ ಭಯೋತ್ಪಾದನೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು.
‘ಸನಾತನ ಧರ್ಮಕ್ಕೆ ಇಸ್ಲಾಂ ರಾಜಕೀಯ ನೀಡಿದಷ್ಟು ನೋವು ಯಾವುದೂ ನೀಡಿಲ್ಲ’ ಎಂದು ಅವರು ಹೇಳಿದರು.
ಛತ್ರಪತಿ ಶಿವಾಜಿ ಮಹರಾಜ್, ಗುರು ಗೋವಿಂದ ಸಿಂಗ್, ಮಹಾರಾಣ ಪ್ರತಾಪ್ ಹಾಗೂ ಮಹಾರಾಣಾ ಸಂಗ ಮುಂತಾದವರು ಇಸ್ಲಾಂ ರಾಜಕೀಯದ ವಿರುದ್ಧ ಹೋರಾಟ ಮಾಡಿದರು. ಆದರೆ ಅದ್ಯಾವುದೂ ಚರ್ಚೆಯಾಗುತ್ತಿಲ್ಲ ಎಂದು ಆದಿತ್ಯನಾಥ ಹೇಳಿದ್ದಾರೆ.
ಇಂದಿಗೂ ಜಲಾಲುದ್ದೀನ್ ಅಲಿಯಾಸ್ ಚಂಗೂರ್ ಮುಂತಾದವರು ರಾಜಕೀಯ ಇಸ್ಲಾಂ ಅನ್ನು ಪ್ರಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಹಣದ ಆಮಿಷ ಒಡ್ಡಿ ಮತಾಂತರಕ್ಕೆ ಪ್ರೇರೇಪಿಸುವ ಜಾಲ ನಡೆಸುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಇತ್ತೀಚೆಗೆ ಚಂಗೂರ್ ಅವರನ್ನು ಬಂಧಿಸಿದ್ದರು.
ರಾಜ್ಯದಲ್ಲಿ ಹಲಾಲ್ ಪ್ರಮಾಣಿತ ವಸ್ತುಗಳ ಮಾರಾಟವನ್ನು ನಿಷೇಧಿಸಲಾಗಿದೆ ಎಂದ ಅವರು, ಸ್ವದೇಶಿ ವಸ್ತುಗಳನ್ನು ಖರೀದಿಸಬೇಕು ಎಂದು ಕರೆ ನೀಡಿದರು. ‘ಖರೀದಿ ಮಾಡುವುದಕ್ಕೂ ಮುನ್ನ ವಸ್ತುಗಳು ಹಲಾಲ್ ಪ್ರಮಾಣಿತವಲ್ಲ ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ಸಾಬೂನು, ಬಟ್ಟೆ ಮುಂತಾದವುಗಳು ಹಲಾಲ್ ಪ್ರಮಾಣಿತವಾಗಿ ಬಂದರೆ ಆಶ್ಚರ್ಯ ಪಡಬೇಕಿಲ್ಲ’ ಎಂದು ಹೇಳಿದರು.
ರಾಮ ಮಂದಿರ ಆಂದೋಲನದಲ್ಲಿ ಆರ್ ಎಸ್ ಎಸ್ ಕೊಡುಗೆಯನ್ನು ಹೊಗಳಿದ ಅವರು, ರಾಮ ಮಂದಿರ ನಿರ್ಮಾಣಕ್ಕೆ ಸಂಘದ ಕಾರ್ಯಕರ್ತರು ಲಾಠಿ ಏಟು, ಗುಂಡೇಟು ತಿಂದರು. ಕೊನೆಗೂ ಅದು ನಿರ್ಮಾಣವಾಯಿತು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.