ADVERTISEMENT

ಮಾಲೆಗಾಂವ್ ಸ್ಫೋಟ: ಸುಳ್ಳು ಪ್ರಕರಣ ದಾಖಲಿಸಿದ್ದ ಕಾಂಗ್ರೆಸ್ ಕ್ಷಮೆ ಕೇಳಲಿ – ಯೋಗಿ

ಪಿಟಿಐ
Published 29 ಡಿಸೆಂಬರ್ 2021, 14:41 IST
Last Updated 29 ಡಿಸೆಂಬರ್ 2021, 14:41 IST
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್   

ಫಾರೂಖಾಬಾದ್: ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಸಂಘಟನೆಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಕ್ಕಾಗಿ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗ್ರಹಿಸಿದ್ದಾರೆ.

ಬಿಜೆಪಿಯ ‘ಜನ ವಿಶ್ವಾಸ ಯಾತ್ರೆ’ಯಲ್ಲಿ ಮಾತನಾಡಿದ ಅವರು, ‘ಭಯೋತ್ಪಾದನೆಯನ್ನು ಪೋಷಿಸುವ ಪಕ್ಷವೊಂದು ಅಧಿಕಾರದಲ್ಲಿದ್ದಾಗ ಹಿಂದೂ ಸಂಘಟನೆಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘2008ರಲ್ಲಿನ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್‌) ನನ್ನ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು. ಆ ಸಂದರ್ಭದಲ್ಲಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ನಾಲ್ವರು ಆರ್‌ಎಸ್‌ಎಸ್ ಮುಖಂಡರ ಹೆಸರು ಹೇಳುವಂತೆ ಎಟಿಎಸ್ ನನಗೆ ಬೆದರಿಕೆ ಒಡ್ಡಿತ್ತು’ ಎಂದು ಪ್ರಕರಣದ ಸಾಕ್ಷಿದಾರರೊಬ್ಬರು ಮಂಗಳವಾರ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಯೋಗಿ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಕಾಂಗ್ರೆಸ್‌ನ ಈ ಕಿಡಿಗೇಡಿತನವು ಇಡೀ ದೇಶದ ವಿರುದ್ಧ ಎಸಗಿದ ಅಪರಾಧವಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ಕ್ಷಮೆಯಾಚಿಸಬೇಕು’ ಎಂದು ಯೋಗಿ ಆಗ್ರಹಿಸಿದ್ದಾರೆ.

‘ಕಾಂಗ್ರೆಸ್ ಈ ದೇಶದೊಂದಿಗೆ ಚೆಲ್ಲಾಟವಾಡಿದ್ದು ಇನ್ನೂ ಮರೆಯಾಗಿಲ್ಲ. ಅಧಿಕಾರದಲ್ಲಿದ್ದಾಗ ಭಯೋತ್ಪಾದಕರಿಗೆ ಬೆಂಬಲ ನೀಡಿದ್ದಲ್ಲದೆ, ಹಿಂದೂ ಸಂಘಟನೆಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿತ್ತು. ಈಗ ಅಧಿಕಾರ ಇಲ್ಲದೇ ಇರುವಾಗ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ವಿರೋಧ ವ್ಯಕ್ತಪಡಿಸುತ್ತಿದೆ’ ಎಂದು ಯೋಗಿ ಟೀಕಿಸಿದ್ದಾರೆ.

ಅಖಿಲೇಶ್ ಯಾದವ್ ವಿರುದ್ಧವೂ ವಾಗ್ದಾಳಿ

‘ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ, ಕಾನ್ಪುರ ಮೂಲದ ಸುಗಂಧದ್ರವ್ಯ ವ್ಯಾಪಾರಿಯ ಮೇಲೆ ಆದಾಯ ತೆರಿಗೆ ದಾಳಿಯನ್ನು ಉಲ್ಲೇಖಿಸಿ, ಅಖಿಲೇಶ್ ಏಕೆ ನೋಟು ಅಮಾನ್ಯೀಕರಣವನ್ನು ವಿರೋಧಿಸುತ್ತಿದ್ದಾರೆ ಎಂಬುದನ್ನು ಈ ದಾಳಿ ತೋರಿಸುತ್ತದೆ’ ಎಂದು ಹೇಳಿದ್ದಾರೆ.

‘ಹಿಂದಿನ ಸರ್ಕಾರಗಳ ಅವಧಿಯಲ್ಲಿ ಬಚ್ಚಿಟ್ಟಿದ್ದ ಬಡವರ ಹಣ ಈಗ ಗೋಡೆಗಳಿಂದ ಹೊರಬರುತ್ತಿರುವುದನ್ನು ನೀವು ನೋಡುತ್ತಿದ್ದೀರಿ. ‘ಬಾಬುವಾ’ (ಅಖಿಲೇಶ್)ನೋಟು ಅಮಾನ್ಯೀಕರಣವನ್ನು ಏಕೆ ವಿರೋಧಿಸಿದರು ಎಂದು ಈಗ ನಿಮಗೆ ಅರ್ಥವಾಗಿರಬೇಕು. ಈ ಹಣವು ಬಡವರಿಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಮೀಸಲಾಗಿತ್ತು. ಇದು ನಿಮ್ಮ ಜಿಲ್ಲೆಯ ಅಭಿವೃದ್ಧಿಗೆ ಸಹಾಯಕವಾಗುತ್ತಿತ್ತು. ಆದರೆ, ಅದನ್ನು ಕಿತ್ತುಕೊಂಡು ಬಚ್ಚಿಡಲಾಗಿದೆ. ನಾವೀಗ ಅದನ್ನು ಹೊರತೆಗೆಯುತ್ತಿದ್ದೇವೆ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸುತ್ತೇವೆ’ ಎಂದು ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.

ಉಚಿತ ಪಡಿತರ ವಿತರಣೆ ಸೇರಿದಂತೆ ಬಿಜೆಪಿ ಸರ್ಕಾರದ ವಿವಿಧ ಯೋಜನೆಗಳನ್ನು ಉಲ್ಲೇಖಿಸಿದ ಅವರು, ‘ಸಮರ್ಥ ಸರ್ಕಾರವಿದ್ದಾಗ, ಅದು ಜನರಿಗೆ ಉತ್ತಮ ಯೋಜನೆಗಳನ್ನು ತರುತ್ತದೆ’ ಎಂದು ಆದಿತ್ಯನಾಥ್ ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.