ADVERTISEMENT

ಉತ್ತರ ಪ್ರದೇಶದಲ್ಲಿ ಚಿತಾಗಾರಗಳನ್ನಷ್ಟೇ ನಿರ್ಮಿಸಿದ ಯೋಗಿ: ಅರವಿಂದ ಕೇಜ್ರಿವಾಲ್‌

ಪಿಟಿಐ
Published 2 ಜನವರಿ 2022, 16:05 IST
Last Updated 2 ಜನವರಿ 2022, 16:05 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್   

ಲಖನೌ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಉತ್ತರ ಪ್ರದೇಶದಲ್ಲಿ ಚಿತಾಗಾರಗಳನ್ನು ಮಾತ್ರವೇ ನಿರ್ಮಿಸಿ, ಅಲ್ಲಿಗೆ ಭಾರಿ ಸಂಖ್ಯೆಯಲ್ಲಿ ಜನರನ್ನು ಕಳುಹಿಸಲು 'ವ್ಯವಸ್ಥೆ' ಮಾಡಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.

ಆಮ್‌ ಆದ್ಮಿಪಕ್ಷ (ಎಎಪಿ) ನಗರದಲ್ಲಿ ಆಯೋಜಿಸಿದ್ದ ರ‍್ಯಾಲಿ ವೇಳೆ ಮಾತನಾಡಿದ ಕೇಜ್ರಿವಾಲ್, ಉತ್ತರ ಪ್ರದೇಶವು ಕೋವಿಡ್‌–19 ಎರಡನೇ ಅಲೆ ವೇಳೆ ಕಳಪೆ ನಿರ್ವಹಣೆ ತೋರುವ ಮೂಲಕ ವಿಶ್ವದಲ್ಲಿಯೇ ಅತ್ಯಂತ ಕೆಟ್ಟ ಹೆಸರು ಪಡೆದುಕೊಂಡಿದೆ. ಅದನ್ನೆಲ್ಲ ಮುಚ್ಚಿಡುವ ಸಲುವಾಗಿ ಸರ್ಕಾರವು, ಜನರ ಹಣವನ್ನು ಅಪಾರ ಪ್ರಮಾಣದಲ್ಲಿ ಜಾಹೀರಾತುಗಳಿಗಾಗಿ ವ್ಯಯಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನೀಡಿದ್ದ ಹೇಳಿಕೆಯೊಂದನ್ನು ಉಲ್ಲೇಖಿಸಿ ಮಾತನಾಡಿರುವ ಕೇಜ್ರಿವಾಲ್, ''ಉತ್ತರ ಪ್ರದೇಶದಲ್ಲಿ ಖಬರಿಸ್ಥಾನ (ಮುಸ್ಲಿಮರು ಅಂತ್ಯಸಂಸ್ಕಾರ ನಡೆಸುವ ಸ್ಥಳ) ನಿರ್ಮಿಸುವುದಾದರೆ, ಸ್ಮಶಾನಗಳೂ ನಿರ್ಮಾಣವಾಗಲಿವೆ' ಎಂದು ಬಿಜೆಪಿಯ ಮಹಾನಾಯಕ (ಮೋದಿ) ಹೇಳಿದ್ದರು'

ADVERTISEMENT

'ದುರದೃಷ್ಟವಶಾತ್, ಯೋಗಿ ಆದಿತ್ಯನಾಥ ಅವರು ಕಳೆದ ಐದು ವರ್ಷಗಳಲ್ಲಿ ಸ್ಮಶಾನಗಳನ್ನು ಮಾತ್ರವೇ ನಿರ್ಮಿಸಿ, ಜನರನ್ನು ದೊಡ್ಡ ಸಂಖ್ಯೆಯಲ್ಲಿ ಅಲ್ಲಿಗೆ ಕಳುಹಿಸಲು ವ್ಯವಸ್ಥೆ ಮಾಡಿದ್ದಾರೆ.ಕೊರೊನಾವೈರಸ್‌ ನಿಯಂತ್ರಿಸುವಲ್ಲಿ ಪ್ರಪಂಚದ ಯಾವುದಾದರೂ ರಾಜ್ಯ ಕೆಟ್ಟ ನಿರ್ವಹಣೆ ತೋರಿದೆ ಎಂದರೆ, ಅದು ಉತ್ತರ ಪ್ರದೇಶವೇ ಆಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದುವರಿದು,'ತಮ್ಮ ಆಡಳಿತದ ದೋಷಗಳನ್ನು ಮುಚ್ಚಿಕೊಳ್ಳಲು ಉತ್ತರ ಪ್ರದೇಶ ಸರ್ಕಾರ, ಅಮೆರಿಕದ ನಿಯತಕಾಲಿಕೆಗಳಲ್ಲಿ (ಮ್ಯಾಗಜಿನ್) ಹತ್ತು ಪುಟಗಳ ಜಾಹೀರಾತು ನೀಡುವುದಕ್ಕಾಗಿ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಅಪಾರ ಪ್ರಮಾಣದಲ್ಲಿ ಸುರಿಯುತ್ತಿದೆ' ಎಂದು ಹೇಳಿದ್ದಾರೆ.

ಎಎಪಿಯ ಮುಖ್ಯಸ್ಥರೂ ಆಗಿರುವ ದೆಹಲಿ ಸಿಎಂ, 'ನಮ್ಮ ವಿರೋಧಿಗಳು (ಬಿಜೆಪಿ) ಸ್ಮಶಾನ, ಚಿತಾಗರಗಳನ್ನು ನಿರ್ಮಿಸುವುದನ್ನು ಚೆನ್ನಾಗಿ ತಿಳಿದಿದ್ದಾರೆ. ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸುವುದು ಹೇಗೆ ಎಂಬುದು ನನಗೆ ಗೊತ್ತಿದೆ' ಎಂದು ತಿವಿದಿದ್ದಾರೆ.

'ನಾನು ಅದನ್ನು ದೆಹಲಿಯಲ್ಲಿ ಮಾಡಿದ್ದೇನೆ. ಅದೇರೀತಿ, ಉತ್ತರ ಪ್ರದೇಶದಲ್ಲಿಯೂ ಮಾಡುತ್ತೇನೆ' ಎನ್ನುವ ಮೂಲಕಉತ್ತರ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಮತ್ತು ಶಿಕ್ಷಣ ನೀಡುವ ಭರವಸೆ ನೀಡಿದ್ದಾರೆ.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಇದೇ ವರ್ಷ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.