ನವದೆಹಲಿ: ಮೋಟಾರು ವಾಹನ ಅಪಘಾತಗಳಲ್ಲಿ ಗಾಯಗೊಂಡವರಿಗೆ ನಗದು ರಹಿತವಾಗಿ ಚಿಕಿತ್ಸೆ ಒದಗಿಸುವುದಕ್ಕೆ ಸಂಬಂಧಿಸಿದ ಯೋಜನೆ ರೂಪಿಸುವುದನ್ನು ವಿಳಂಬ ಮಾಡಿರುವ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ‘ನೀವು ಬೃಹತ್ ಹೆದ್ದಾರಿಗಳನ್ನು ನಿರ್ಮಿಸುತ್ತಿದ್ದೀರಿ. ಆದರೆ ಜನರು ಅಲ್ಲಿ ಅಗತ್ಯ ಸೌಲಭ್ಯಗಳಿಲ್ಲದೆ ಸಾಯುತ್ತಿದ್ದಾರೆ’ ಎಂದು ಹೇಳಿದೆ.
ಜನವರಿ 8ರಂದು ತಾನು ಆದೇಶ ನೀಡಿದ್ದರೂ ಕೇಂದ್ರ ಸರ್ಕಾರವು ಅದನ್ನು ಪಾಲಿಸಿಲ್ಲ, ಹೆಚ್ಚುವರಿ ಕಾಲಾವಕಾಶ ಕೇಳಿಯೂ ಇಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಉಜ್ವಲ್ ಭೂಯಾನ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 164(ಎ)ಅನ್ನು 2022ರ ಏಪ್ರಿಲ್ 1ರಿಂದ ಮೂರು ವರ್ಷಗಳ ಅವಧಿಗೆ ಜಾರಿಗೆ ತರಲಾಗಿದೆಯಾದರೂ, ಅರ್ಹರಿಗೆ ಮಧ್ಯಂತರ ಪರಿಹಾರ ಒದಗಿಸಲು ಬೇಕಿರುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿಲ್ಲ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿತು.
‘ನೀವು ನ್ಯಾಯಾಂಗ ನಿಂದನೆಯ ಕೃತ್ಯ ಎಸಗಿದ್ದೀರಿ. ಹೆಚ್ಚುವರಿ ಸಮಯಾವಕಾಶವನ್ನು ನೀವು ಕೇಳಿಲ್ಲ. ಇಲ್ಲಿ ಏನು ನಡೆಯುತ್ತಿದೆ? ಯೋಜನೆ ಯಾವಾಗ ರೂಪಿಸುತ್ತೀರಿ ಎಂಬುದನ್ನು ತಿಳಿಸಿ. ನೀವೇ ರೂಪಿಸಿದ ಕಾನೂನುಗಳ ಬಗ್ಗೆ ನೀವು ಗಮನ ನೀಡುತ್ತಿಲ್ಲ... ಈ ನಿಯಮ ಜಾರಿಗೆ ಬಂದು ಮೂರು ವರ್ಷಗಳಾಗಿವೆ. ಜನಸಾಮಾನ್ಯರ ಒಳಿತಿಗಾಗಿ ನೀವು ನಿಜವಾಗಿಯೂ ಕೆಲಸ ಮಾಡುತ್ತಿದ್ದೀರಾ’ ಎಂದು ಪೀಠವು ಪ್ರಶ್ನಿಸಿತು.
‘ನೀವು ಈ ಅಂಶದ ಬಗ್ಗೆ ಗಂಭೀರವಾಗಿ ಆಲೋಚಿಸಿಲ್ಲವೇ? ರಸ್ತೆ ಅಪಘಾತಗಳಲ್ಲಿ ಜನ ಸಾಯುತ್ತಿದ್ದಾರೆ. ಬೃಹತ್ ಹೆದ್ದಾರಿಗಳನ್ನು ನೀವು ನಿರ್ಮಿಸುತ್ತಿದ್ದೀರಿ. ಆದರೆ ಅಗತ್ಯ ಸೌಲಭ್ಯಗಳು ಇಲ್ಲದೆ ಜನರು ಅಲ್ಲಿ ಸಾಯುತ್ತಿದ್ದಾರೆ. ಅಪಘಾತ ನಡೆದ ನಂತರ ನಿಗದಿತ ಸಮಯದ ಒಳಗೆ ಚಿಕಿತ್ಸೆ ಕೊಡಿಸಲು ಯೋಜನೆಯೇ ಇಲ್ಲ. ಇಷ್ಟೊಂದು ಹೆದ್ದಾರಿಗಳನ್ನು ನಿರ್ಮಿಸಿ ಪ್ರಯೋಜನ ಏನು’ ಎಂದು ಕೂಡ ಪೀಠವು ರಸ್ತೆ ಸಾರಿಗೆ ಸಚಿವಾಲಯದ ಕಾರ್ಯದರ್ಶಿಯನ್ನು ಪ್ರಶ್ನಿಸಿತು.
ಅಪಘಾತ ನಡೆದ ಒಂದು ತಾಸಿನ ಒಳಗೆ ಚಿಕಿತ್ಸೆ ಕೊಡಿಸುವ ಯೋಜನೆಯನ್ನು ಒಂದು ವಾರದಲ್ಲಿ ಜಾರಿಗೆ ತರಲಾಗುತ್ತದೆ ಎಂಬ ಹೇಳಿಕೆಯನ್ನು ಪೀಠವು ದಾಖಲಿಸಿಕೊಂಡಿತು. ಯೋಜನೆಯ ಬಗ್ಗೆ ಅಧಿಸೂಚನೆಯಲ್ಲಿ ಪ್ರಕಟಿಸಿದ್ದನ್ನು ಮೇ 9ರೊಳಗೆ ತಿಳಿಸಬೇಕು ಎಂದು ಸೂಚಿಸಿದ ಪೀಠವು ವಿಚಾರಣೆಯನ್ನು ಮೇ 13ಕ್ಕೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.