ADVERTISEMENT

ಯುವತಿ ಸಾವು ಪ್ರಕರಣಕ್ಕೆ ತಿರುವು: ರೈತರ ಪ್ರತಿಭಟನೆ ಸ್ಥಳದಲ್ಲಿ ಅತ್ಯಾಚಾರ ಆರೋಪ

​ಪ್ರಜಾವಾಣಿ ವಾರ್ತೆ
Published 10 ಮೇ 2021, 19:31 IST
Last Updated 10 ಮೇ 2021, 19:31 IST
ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ದೃಶ್ಯ (ಸಾಂದರ್ಭಿಕ ಚಿತ್ರ)
ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ದೃಶ್ಯ (ಸಾಂದರ್ಭಿಕ ಚಿತ್ರ)    

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಯುವತಿಯೊಬ್ಬರ ಸಾವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ದೆಹಲಿ-ಹರಿಯಾಣದ ಟಿಕ್ರಿ ಗಡಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಯುವತಿ ಏಪ್ರಿಲ್ 30ರಂದು ಮೃತಪಟ್ಟಿದ್ದರು.

ಯುವತಿ ಮೇಲೆ ಅತ್ಯಾಚಾರ ನಡೆದಿದ್ದು ತಿಳಿದ ತಕ್ಷಣವೇ ಸಂಬಂಧಿತರ ವಿರುದ್ದ ಕ್ರಮ ತೆಗೆದುಕೊಳ್ಳಲಾಗಿತ್ತು ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಹೇಳಿದೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಏಪ್ರಿಲ್ 15ರಂದು ಪಶ್ಚಿಮ ಬಂಗಾಳದಿಂದ ಹೊರಟಿದ್ದ ರೈತರ ‘ಕಿಸಾನ್ ಸೋಷಿಯಲ್ ಆರ್ಮಿ’ಯ ತಂಡದಲ್ಲಿ ಒಬ್ಬ ಯುವತಿ ಸಹ ಇದ್ದರು. ದಾರಿ ಮಧ್ಯದಲ್ಲೇ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು. ಆದರೂ ಆ ಮಹಿಳೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ನಂತರ ಕೋವಿಡ್‌ ತಗುಲಿದ ಕಾರಣ ಆಕೆ ಏಪ್ರಿಲ್ 30ರಂದು ಮೃತಪಟ್ಟಿದ್ದರು ಎಂದು ಕಿಸಾನ್ ಸಂಯುಕ್ತ ಮೋರ್ಚಾ ಹೇಳಿದೆ. ಈ ಸಂಬಂಧ ಭಾನುವಾರ ಬೆಳಿಗ್ಗೆ ಹರಿಯಾಣ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ADVERTISEMENT

‘ಅತ್ಯಾಚಾರ ನಡೆದಿರುವ ವಿಷಯ ಗೊತ್ತಾದ ನಂತರ ಆ ಸಂಘಟನೆ ವಿರುದ್ಧ ಕ್ರಮ ತೆಗದುಕೊಂಡಿದ್ದೆವು. ಟಿಕ್ರಿ ಮತ್ತು ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಆ ಸಂಘಟನೆಯ ಸದಸ್ಯರನ್ನು ತೆರವು ಮಾಡಲಾಗಿತ್ತು. ಅವರ ಬ್ಯಾನರ್‌ಗಳನ್ನು ತೆಗೆಯಲಾಗಿತ್ತು. ರೈತ ಪ್ರತಿಭಟನೆಯಲ್ಲಿ ಎಲ್ಲಿಯೂ ಅವರು ಭಾಗವಹಿಸದಂತೆ ಎಚ್ಚರವಹಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲೂ ಅವರು ರೈತರ ಪರ ಹೋರಾಟ ನಡೆಸದಂತೆ ನೋಡಿಕೊಂಡಿದ್ದೇವೆ’ ಎಂದು ಎಸ್‌ಕೆಎಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಹೋರಾಟಗಾರರ ವಿರುದ್ಧ ಆಕ್ರೋಶ: ‘ಅತ್ಯಾಚಾರ ನಡೆದಿದ್ದು ರೈತ ಹೋರಾಟದ ಎಲ್ಲಾ ನಾಯಕರಿಗೂ ಗೊತ್ತಿತ್ತು. ಆರೋಪಿಗಳ ಬಗ್ಗೆ ಅವರಿಗೆ ಮಾಹಿತಿ ಇತ್ತು. ಆದರೆ ಅದನ್ನು ಮುಚ್ಚಿಟ್ಟಿದ್ದಾರೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರಿಗೆ ಮಾಹಿತಿ ಇತ್ತು. ಆದರೂ ಅವರು ಅದನ್ನು ಮುಚ್ಚಿಟ್ಟಿದ್ದಾರೆ ಎಂದು ಉತ್ತರ ಪ್ರದೇಶದ ಜನಸತ್ತಾ ಆನ್‌ಲೈನ್ ವರದಿ ಮಾಡಿದೆ. ಇದನ್ನು ಟ್ವಿಟರ್‌ನಲ್ಲಿ ಸಾವಿರಾರು ಮಂದಿ ಹಂಚಿಕೊಂಡಿದ್ದಾರೆ. ಈ ಎಲ್ಲಾ ನಾಯಕರನ್ನು ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಲಾಗಿದೆ.

‘ನಾನೂ ರೈತ’ ಅಭಿಯಾನ
‘ಅತ್ಯಾಚಾರಕ್ಕೆ ಸಂಬಂಧಿಸಿ ದೂರು ದಾಖಲಾಗಿಲ್ಲ. ಯುವತಿ ಮೃತಪಟ್ಟ ನಂತರವೇ ಅತ್ಯಾಚಾರದ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಪೊಲೀಸರು ಈಗ ಎಫ್‌ಐಆರ್ ದಾಖಲಿಸಿದ್ದಾರೆ. ರೈತ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದಲೇ ಇದನ್ನು ಸೃಷ್ಟಿಸಲಾಗಿದೆ’ ಎಂದು ಪ್ರತಿಭಟನೆನಿರತ ರೈತರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದಬ್ಬಾಳಿಕೆಯನ್ನು ಮೀರಿ ಹೋರಾಡಬೇಕು ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಅವರು ಟ್ವಿಟರ್‌ನಲ್ಲಿ ಸೋಮವಾರ ಕರೆ ನೀಡಿದ್ದಾರೆ. मैं_भी_किसान (ನಾನೂ ರೈತ) ಹ್ಯಾಷ್‌ಟ್ಯಾಗ್‌ನಲ್ಲಿ ಅವರು ಟ್ವೀಟ್ ಮಾಡಿದ್ದಾರೆ. ಅವರು ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ರಾತ್ರಿ 9ರ ವೇಳೆಗೆ 1.7 ಲಕ್ಷಕ್ಕೂ ಹೆಚ್ಚು ಬಾರಿ ಈ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಲಾಗಿದೆ.

ದೇಶದ ಎಲ್ಲೆಡೆಯಿಂದ ರೈತರು ಹೊಲದಲ್ಲಿ ದುಡಿಯುತ್ತಿರುವುದರ ಸೆಲ್ಫಿ ಚಿತ್ರಗಳನ್ನು मैं_भी_किसान ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.