ನವದೆಹಲಿ: ಸಂಸತ್ ಭವನದ ಆವರಣ ಗೋಡೆಯನ್ನು ಹತ್ತಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
ಮುಂಜಾನೆ 5:50ಕ್ಕೆ ಈ ಘಟನೆ ನಡೆದಿದ್ದು, ಬಂಧಿತ ವ್ಯಕ್ತಿಯನ್ನು ಉತ್ತರಪ್ರದೇಶದ ರಾಮ್‌ಕುಮಾರ್ ಬಿಂಡ್ (20) ಎಂದು ಗುರುತಿಸಲಾಗಿದ್ದು, ಗುಜರಾತ್‌ನ ಸೂರತ್‌ನಲ್ಲಿರುವ ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿದ್ದಾರೆ.
‘ಆರೋಪಿಯು ಮಾನಸಿಕ ಅಸ್ವಸ್ಥರಂತೆ ಕಂಡುಬರುತ್ತಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ’ ಎಂದು ದೆಹಲಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಆವರಣ ಗೋಡೆಯ ಬದಿಯಲ್ಲಿರುವ ಮರವನ್ನು ಹತ್ತುವ ಮೂಲಕ ರಾಮ್ ಕುಮಾರ್ ಸಂಸತ್ ಭವನವನ್ನು ಪ್ರವೇಶಿಸಲು ಯತ್ನಿಸಿದ್ದರು. ಈ ವೇಳೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮತ್ತು ದೆಹಲಿ ಪೊಲೀಸ್ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃತ್ಯದ ಹಿಂದಿನ ಕಾರಣವನ್ನು ತಿಳಿಯುವ ಸಲುವಾಗಿ ಗುಪ್ತಚರ ವಿಭಾಗ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ದೆಹಲಿ ಪೊಲೀಸ್ ವಿಶೇಷ ಘಟಕವು ರಾಮ್ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.