
ಉದಯ್ ಭಾನು
ನವದೆಹಲಿ: ಎ.ಐ ಶೃಂಗಸಭೆಯಲ್ಲಿ ಅಂಗಿ ತೆಗೆದು ಪ್ರತಿಭಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಇದೇ ಪ್ರಕರಣ ಸಂಬಂಧ ಯುವ ಕಾಂಗ್ರೆಸ್‌ನ ಮೂವರು ಮುಖಂಡರಾದ ಜಿತೇಂದ್ರ ಯಾದವ್, ರಾಜ್ ಗುಜ್ಜರ್ ಮತ್ತು ಅಜಯ್ ಕುಮಾರ್ ಅವರನ್ನು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸೋಮವಾರ ದೆಹಲಿ ಪೊಲೀಸರು ಬಂಧಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಎಂಟು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಐವೈಸಿಯ (ಭಾರತೀಯ ಯುವ ಕಾಂಗ್ರೆಸ್) ಪ್ರಧಾನ ಕಾರ್ಯದರ್ಶಿ ಲಲಿತ್‌ಪುರದ ರಿತಿಕ್ ಅಲಿಯಾಸ್ ಮಾಂಟಿ ಶುಕ್ಲಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಂಪುಗಳ ನಡುವೆ ದ್ವೇಷ ಬಿತ್ತಿದ ಹಾಗೂ ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತಂದ ಆರೋಪಗಳನ್ನು ಇವರ ವಿರುದ್ಧ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
ಯುವ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಎ.ಐ ಶೃಂಗಸಭೆಯ ‘ಎಕ್ಸ್‌ಪೋ’ ನಡೆಯುದ್ದ ಹಾಲ್‌ನಲ್ಲಿ ಶುಕ್ರವಾರ ಕೆಲಹೊತ್ತು ಪ್ರತಿಭಟನೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿತ್ತು.
ನಡೆದದ್ದೇನು?: ಶುಕ್ರವಾರ ಮಧ್ಯಾಹ್ನ 12.30ರ ಸುಮಾರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ‘ಭಾರತ ಮಂಟಪ’ದ ಹಾಲ್ ಸಂಖ್ಯೆ 5ರ ಒಳಗೆ ಏಕಾಏಕಿ ಪ್ರವೇಶಿಸಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ್ದರು. ಪ್ರಧಾನಿ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿತ್ರಗಳಿರುವ ಟಿ-ಶರ್ಟ್‌ಗಳನ್ನು ಪ್ರದರ್ಶಿಸಿದ್ದರು. ಟಿ–ಶರ್ಟ್ ಮೇಲೆ ‘ಭಾರತ– ಅಮೆರಿಕ ವ್ಯಾಪಾರ ಒಪ್ಪಂದ’, ‘ಎಪ್‌ಸ್ಟೈನ್ ಫೈಲ್ಸ್’ ಮತ್ತು ‘ಪ್ರಧಾನಿ ರಾಜಿಯಾಗಿದ್ದಾರೆ’ ಎಂದು ಬರೆಯಲಾಗಿತ್ತು.
‘ಪ್ರತಿಭಟನಕಾರರು ಆನ್‌ಲೈನ್‌ನಲ್ಲಿ ಹೆಸರು ನೋಂದಣಿ ಮಾಡಿಸಿ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ನಂತರ ಹಾಲ್‌ಗೆ ಪ್ರವೇಶಿಸಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ದೇವೇಶ್ ಕುಮಾರ್ ಮಹ್ಲಾ ತಿಳಿಸಿದ್ದರು. ‘ಟಿ–ಶರ್ಟ್ ಕಾಣದಂತೆ ಅದರ ಮೇಲೆ ಸ್ವೆಟರ್ ಧರಿಸಿದ್ದರು. ಹಾಲ್ ಪ್ರವೇಶಿಸಿದ ಬಳಿಕ ಸ್ವೆಟರ್ ತೆಗೆದು ಟಿ–ಶರ್ಟ್ ಪ್ರದರ್ಶಿಸಿದರು’ ಎಂದಿದ್ದರು.
ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗುತ್ತಾ ಹಾಲ್‌ನಲ್ಲಿ ಒಂದಷ್ಟು ದೂರ ಮೆರವಣಿಗೆ ನಡೆಸಿದ್ದರು. ಈ ವೇಳೆ ಅಲ್ಲಿದ್ದ ಕೆಲವರು ಪ್ರತಿಭಟನಕಾರರ ಕೈಯಿಂದ ಟಿ–ಶರ್ಟ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಪರಸ್ಪರ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಗೊಂದಲ ಉಂಟಾಗಿತ್ತು. ಅಲ್ಲಿದ್ದ ಸ್ವಯಂಸೇವಕರು ಮತ್ತು ಭದ್ರತಾ ಸಿಬ್ಬಂದಿ ತಕ್ಷಣವೇ ಎಲ್ಲ ಪ್ರತಿಭಟನಕಾರರನ್ನು ಹೊರಗೆ ಕಳುಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.