ADVERTISEMENT

ಬೆಲೆ ಏರಿಕೆ ವಿರೋಧಿಸಿ ಪೆಟ್ರೋಲಿಯಂ ಸಚಿವಾಲಯದ ಮುಂದೆ ಯುವ ಕಾಂಗ್ರೆಸ್ ಪ್ರತಿಭಟನೆ

ಪಿಟಿಐ
Published 29 ಮಾರ್ಚ್ 2022, 11:03 IST
Last Updated 29 ಮಾರ್ಚ್ 2022, 11:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯನ್ನು ವಿರೋಧಿಸಿ ಕೇಂದ್ರ ಪೆಟ್ರೋಲಿಯಂ ಸಚಿವಾಲಯದ (ಐವೈಸಿ) ಮುಂದೆ ಮಂಗಳವಾರ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡಿದ್ದಾರೆ.

ಪ್ರತಿಭಟನೆಯ ವಿಡಿಯೊವನ್ನು ಐವೈಸಿ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಜನರ ಮೇಲೆ ಹಣದುಬ್ಬರದ ಹೊರೆ ನಿರಂತರವಾಗಿ ಹೆಚ್ಚುತ್ತಿದೆ. ಹಣದುಬ್ಬರಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಕಾರಣವನ್ನು ನೀಡಬಹುದು. ಆದರೆ ದೇಶದ ಪ್ರತಿಯೊಬ್ಬ ನಾಗರಿಕರಿಗೂ ನಿಜವಾದ ಕಾರಣ ತಿಳಿದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಶೇ.26.42ರಷ್ಟು ಕಡಿಮೆಯಾದಾಗ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ನಿರಂತರವಾಗಿ ಏರಿಕೆಯಾಗುತ್ತಿದ್ದವು ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ಸಾರ್ವಜನಿಕರು ವಿಫಲರಾಗಿದ್ದಾರೆ ಎಂದು ಅವರು ಹೇಳಿದರು.

ADVERTISEMENT

ವಿಡಿಯೊದಲ್ಲಿ ಪ್ರತಿಭಟನಾಕಾರರು ಎಲ್‌ಪಿಜಿ ಸಿಲಿಂಡರ್ ಜೊತೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಫೋಟೊವನ್ನಿಟ್ಟು ಅಣಕು ಶವಯಾತ್ರೆ ನಡೆಸುತ್ತಿರುವುದನ್ನು ಕಾಣಬಹುದು. ಈ ವೇಳೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

'ಏರುತ್ತಿರುವ ಇಂಧನ ಬೆಲೆಗಳತ್ತ ಗಮನ ಸೆಳೆದ ಪ್ರತಿಭಟನಾಕಾರರು ಸಾಂಕೇತಿಕವಾಗಿ ಖಾಲಿ ಸಿಲಿಂಡರ್ ಅನ್ನು ಹಿಡಿದುಕೊಂಡಿದ್ದರು' ಎಂದು ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ರಾಹುಲ್ ರಾವ್ ತಿಳಿಸಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದೊಂದು ವಾರದಿಂದ ಏರುತ್ತಲೇ ಇದೆ. ಮಂಗಳವಾರವೂ ಲೀಟರ್‌ ಪೆಟ್ರೋಲ್‌ಗೆ 80 ಪೈಸೆ ಮತ್ತು ಲೀಟರ್ ಡೀಸೆಲ್‌ಗೆ 70 ಪೈಸೆ ಹೆಚ್ಚಳವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಬಹುತೇಕ ರಾಜ್ಯಗಳ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ. ಈ ವಾರವೊಂದರಲ್ಲೇ ತೈಲ ದರ ಪ್ರತಿ ಲೀಟರ್‌ಗೆ ₹ 4.80 ರಷ್ಟು ಏರಿಕೆಯಾದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.