ನವದೆಹಲಿ: ಚೀನಾ ದೇಶವು ಬಾಂಗ್ಲಾದೇಶದ ಕರಾವಳಿಯನ್ನು ತನ್ನ ಆರ್ಥಿಕ ಚಟುವಟಿಕೆಗಳ ವಿಸ್ತರಣೆಗೆ ಬಳಕೆ ಮಾಡಿಕೊಳ್ಳಬೇಕು ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ಹೇಳಿರುವುದು ಭಾರತದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಯೂನಸ್ ಅವರು ಈ ವಾರ ಬ್ಯಾಂಕಾಕ್‌ನಲ್ಲಿ ನಡೆಯುವ ಕಾರ್ಯಕ್ರಮ ಒಂದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತುಕತೆ ನಡೆಸುವುದು ಇನ್ನೂ ಖಚಿತವಾಗಿಲ್ಲ. ಈ ನಡುವೆ, ಅವರು ಚೀನಾದಲ್ಲಿ ಈ ಮಾತು ಆಡಿದ್ದಾರೆ.
ಭಾರತದ ಈಶಾನ್ಯ ಭಾಗದ ಏಳು ರಾಜ್ಯಗಳಿಗೆ ಸಮುದ್ರ ಮಾರ್ಗದ ನೇರ ಸಂಪರ್ಕ ಇಲ್ಲದಿರುವುದು ಚೀನಾ ಮತ್ತು ಬಾಂಗ್ಲಾದೇಶಕ್ಕೆ ಅವಕಾಶ ಸೃಷ್ಟಿಸಿದೆ. ಚೀನಾ ದೇಶವು, ಬಾಂಗ್ಲಾದೇಶದ ವಿಶಿಷ್ಟ ಸ್ಥಾನದ ಪ್ರಯೋಜನವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಯೂನಸ್ ಹೇಳಿದ್ದಾರೆ.
ಚೀನಾ ಭೇಟಿಯ ಸಂದರ್ಭದಲ್ಲಿ ಅವರು ಈ ಮಾತು ಆಡಿದ್ದಾರೆ. ಬಾಂಗ್ಲಾದಲ್ಲಿ ತೀಸ್ತಾ ನದಿ ಸಂರಕ್ಷಣಾ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಚೀನಾದ ಸರ್ಕಾರಿ ಕಂಪನಿಗಳಿಗೆ ಆಹ್ವಾನ ನೀಡಿದ್ದಾರೆ. ಈ ಯೋಜನೆಯು ಭಾರತದ ‘ಚಿಕನ್ಸ್ ನೆಕ್’ ಕಾರಿಡಾರ್‌ಗೆ ಸನಿಹದಲ್ಲಿದೆ. ಬಾಂಗ್ಲಾದ ಕರಾವಳಿಯಲ್ಲಿ ತಯಾರಿಕಾ ಘಟಕಗಳ ಆರಂಭಕ್ಕೆ ಹೂಡಿಕೆ ಮಾಡುವಂತೆ ಅವರು ಚೀನಾವನ್ನು ಆಹ್ವಾನಿಸಿರುವುದು ಭಾರತದ ಕಳವಳ ಹೆಚ್ಚಲು ಕಾರಣವಾಗಿದೆ.
ತೀಸ್ತಾ ನದಿಗೆ ಸಂಬಂಧಿಸಿದ ಯೋಜನೆಗೆ ನೆರವು ನೀಡಲು ಭಾರತವು ಕೆಲವು ತಿಂಗಳುಗಳ ಹಿಂದೆಯಷ್ಟೇ ಒಪ್ಪಿತ್ತು. ಈ ಯೋಜನೆಯಲ್ಲಿ ಚೀನಾ ಪಾಲುದಾರಿಕೆ ಹೊಂದಿದರೆ, ಚಿಕನ್ಸ್ ನೆಕ್ ಪ್ರದೇಶದಲ್ಲಿ ಚೀನಾದ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಎಂದು ಭಾರತವು ತನ್ನ ಕಳವಳವನ್ನು ಬಾಂಗ್ಲಾದೇಶಕ್ಕೆ ತಿಳಿಸಿತ್ತು.
ಬಾಂಗ್ಲಾದ ಮೊಂಗ್ಲಾ ಬಂದರಿನ ಸೌಲಭ್ಯಗಳ ವಿಸ್ತರಣೆ ಹಾಗೂ ಆಧುನೀಕರಣದಲ್ಲಿ ಚೀನಾದ ಸರ್ಕಾರಿ ಸ್ವಾಮ್ಯದ ಕಂಪನಿಗಳು ಭಾಗಿಯಾಗಬಹುದು ಎಂದು ಯೂನಸ್ ಹೇಳಿದ್ದಾರೆ. ‘ಚಿತ್ತಗಾಂಗ್ ಚೀನಾ ಆರ್ಥಿಕ ಮತ್ತು ಕೈಗಾರಿಕಾ ಪಾರ್ಕ್’ನ ನಿರ್ಮಾಣದಲ್ಲಿ ಚೀನಾದ ಜೊತೆಯಾಗಿ ಕೆಲಸ ಮಾಡಲು ಸಿದ್ಧ ಎಂದು ಕೂಡ ಬಾಂಗ್ಲಾದೇಶ ಹೇಳಿದೆ.
ಆದರೆ 2017ರಲ್ಲಿ ಬಾಂಗ್ಲಾದೇಶವು, ಚಿತ್ತಗಾಂಗ್ ಮತ್ತು ಮೊಂಗ್ಲಾ ಬಂದರಿನಿಂದ ಸರಕುಗಳನ್ನು ಸಾಗಿಸಲು ಭಾರತಕ್ಕೆ ಅವಕಾಶ ಕೊಡುವುದಾಗಿ ಒಪ್ಪಿತ್ತು.
ಬಾಂಗ್ಲಾ ನಿಲುವು: ಕಾಂಗ್ರೆಸ್ ಕಳವಳ
ನವದೆಹಲಿ (ಪಿಟಿಐ): ಭಾರತವನ್ನು ಸುತ್ತವರಿಯಲು ಬಾಂಗ್ಲಾದೇಶವು ಚೀನಾಕ್ಕೆ ಆಹ್ವಾನ ನೀಡಿರುವುದು ದೇಶದ ಈಶಾನ್ಯ ಭಾಗದ ಭದ್ರತೆಗೆ ಅಪಾಯಕಾರಿ ಎಂದು ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರವು ಮಣಿಪುರ ಸೇರಿದಂತೆ ಈಶಾನ್ಯ ಭಾಗದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ದೂರಿದೆ. ‘ನಮ್ಮ ವಿದೇಶಾಂಗ ನೀತಿಯು ಅದೆಷ್ಟು ಕರುಣಾಜನಕ ಸ್ಥಿತಿ ತಲುಪಿದೆಯೆಂದರೆ ಯಾವ ದೇಶದ ರಚನೆಯಲ್ಲಿ ಭಾರತವು ಮಹತ್ವದ ಪಾತ್ರ ಹೊಂದಿತ್ತೋ ಆ ದೇಶವು ಇಂದು ನಮ್ಮ ವಿರುದ್ಧವೇ ಕೆಲಸ ಮಾಡುತ್ತಿದೆ’ ಎಂದು ಕಾಂಗ್ರೆಸ್ಸಿನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.