
ಬೆಂಗಳೂರು: ‘ಸಮಾಜದಲ್ಲಿ ಅಘೋಷಿತ ಅಸ್ಪೃಶ್ಯತೆ ಅಸ್ತಿತ್ವದಲ್ಲಿದ್ದು, ಅದರ ವಿರುದ್ಧ ಹೋರಾಡಲು ಸಂಘಟಿತರಾಗಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಲಹೆ ನೀಡಿದರು.
ಛಲವಾದಿ ಮಹಾಸಭಾವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿ, ‘ಅಸ್ಪೃಶ್ಯತೆಯೆಂಬುದು ಮನಸ್ಸಿಗೆ ಅಂಟಿದ ಮೈಲಿಗೆ. ಅದನ್ನು ತೊಡೆದುಹಾಕುವ ನಿಟ್ಟಿನಲ್ಲಿ ಪಣ ತೊಡಬೇಕಿದೆ’ ಎಂದು ಹೇಳಿದರು.
ಸಭಾದ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ, ‘ಸ್ವಾತಂತ್ರ್ಯ ಬಂದು 60 ವರ್ಷಗಳು ಕಳೆದಿದ್ದರೂ, ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಕೆಂಗೇರಿಗಿಂತ ತುಸು ಮುಂದೆ ಹೋದರೆ ದಲಿತರಿಗೆ ಹೋಟೆಲ್‌ನಲ್ಲಿ ಪ್ರವೇಶವಿಲ್ಲವೆಂಬುದು ಇಂದಿನ ಕಟು ವಾಸ್ತವ’ ಎಂದು ಹೇಳಿದರು.
‘ಛಲವಾದಿ ಸಮುದಾಯದಿಂದ ಈವರೆಗೆ ಒಬ್ಬರೂ ಮುಖ್ಯಮಂತ್ರಿಯಾಗಿಲ್ಲ. ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗಬಾರದು ಎಂಬ ಕಾರಣದಿಂದಲೇ ಅವರನ್ನು ಚುನಾವಣೆಯಲ್ಲಿ ಸೋಲಿಸಲಾಗಿದೆ’ ಎಂದು ಆರೋಪಿಸಿದರು.
‘ಹಿಂದುಳಿದ ಜಾತಿಗಳು ಹಾಗೂ ಉಪಜಾತಿಗಳು ಸಂಘಟನೆಯಾಗುತ್ತಿರುವ ಈ ಹೊತ್ತಿನಲ್ಲಿ ಛಲವಾದಿ ಸಮುದಾಯವು ಒಗ್ಗಟ್ಟನ್ನು ಪ್ರದರ್ಶಿಸಬೇಕು. ಆ ಮೂಲಕ ರಾಜಕೀಯ ಪ್ರಾತಿನಿಧ್ಯ ಪಡೆಯುವ ತುರ್ತು ಎದುರಾಗಿದೆ’ ಎಂದರು.
ವಿಧಾನಪರಿಷತ್ ಸದಸ್ಯೆ ಮೋಟಮ್ಮ, ‘ದಲಿತ ಮಹಿಳೆಯರು ಸ್ವಾಭಿಮಾನದಿಂದ ಸ್ವಾವಲಂಬಿಗಳಾಗಬೇಕು. ಆ ಮೂಲಕ ಸಮುದಾಯಕ್ಕೆ ಉತ್ತಮ ಹೆಸರು ತರಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.