ADVERTISEMENT

ಅಡಿಕೆ ತೋಟ ನೆಲಸಮ ಮಾಡಿದ ರೈತ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 21:00 IST
Last Updated 14 ಜೂನ್ 2013, 21:00 IST

ಹೊಳಲ್ಕೆರೆ: ರೈತರೊಬ್ಬರು ಮೂರೂವರೆ ಎಕರೆಯಲ್ಲಿ ತಾವೇ ಬೆವರು ಹರಿಸಿ ಬೆಳೆಸಿದ ಸುಮಾರು 1,500 ಫಲಭರಿತ ಅಡಿಕೆ ಮರಗಳನ್ನು ಅಂತರ್ಜಲ ಕುಸಿತ, ಅಧಿಕ ನಿರ್ವಹಣಾ ವೆಚ್ಚದಿಂದ ಏರುತ್ತಿರುವ ಸಾಲ, ಕೊಳವೆಬಾವಿಗಳ ವೈಫಲ್ಯ, ಗುಟ್ಕಾ ನಿಷೇಧದಿಂದ ಅಡಿಕೆ ಧಾರಣೆ ಕುಸಿಯುವ ಭೀತಿ... ಮೊದಲಾದ ಕಾರಣಗಳಿಂದ ಆತಂಕಗೊಂಡ ಕಡಿದು ಉರುಳಿಸಿದ್ದಾರೆ. 

ಪಟ್ಟಣದ ರೈತ ಎಚ್.ಸಿ.ಬಸವರಾಜ ಯಾದವ್ ತೋಟ ಉಳಿಸಿಕೊಳ್ಳಲಾರದೆ ಕಂಗಾಲಾಗಿ ಜೆಸಿಬಿ ಯಂತ್ರ ತರಿಸಿ `ನನ್ನ ಕಣ್ಣೆದುರಿಗೆ ಈ ತೋಟ ಇರಬಾರದು. ಇದರಿಂದಲೇ ನಾನು ಲಕ್ಷಾಂತರ ರೂಪಾಯಿ ಸಾಲ ಮಾಡಿದೆ, ಇವು ನನ್ನ ಎದುರಿಗೆ ಇದ್ದರೆ ಮತ್ತೂ ಸಾಲ ಮಾಡಿಸುತ್ತವೆ. ಎಲ್ಲವನ್ನೂ ನಾಶಮಾಡಿ ಹಾಕು' ಎಂದು ಚಾಲಕನಿಗೆ ಹೇಳಿ ಇಡೀ ತೋಟವನ್ನು ನೆಲಸಮಗೊಳಿಸಿದ್ದಾರೆ. ಮರಗಳು ಬೇರುಸಹಿತ ಚೆಲ್ಲಾಪಿಲ್ಲಿಯಾಗಿ ಉರುಳಿ ಬಿದ್ದಿದ್ದು, ಜೋತುಬಿದ್ದಿರುವ ಅಡಿಕೆಗೊನೆಗಳ ದೃಶ್ಯ ಪರಿಸ್ಥಿತಿಯ ಭೀಕರತೆಯನ್ನು ಸೂಚಿಸುವಂತೆ ಇತ್ತು. ಮರಗಳು ಉರುಳುತ್ತಿದ್ದಂತೆ ರೈತನ ಕಣ್ಣಲ್ಲಿ ನೀರು ಜಿನುಗಿದರೆ, ಪತ್ನಿ ಸುಧಾ ರೋದಿಸುತ್ತ ಜೆಸಿಬಿ ಯಂತ್ರಕ್ಕೆ ಅಡ್ಡ ಬರುತ್ತಿದ್ದ ದೃಶ್ಯ ಮನಕರಗಿಸುವಂತೆ ಇತ್ತು.

`ಈಗ ಗುಟ್ಕಾ ನಿಷೇಧಿಸಿರುವುದರಿಂದ ಮುಂದೆ ಅಡಿಕೆಗೆ ಬೆಲೆ ಸಿಗುವುದಿಲ್ಲ. ಸುಮ್ಮನೆ ಲಕ್ಷಾಂತರ ರೂಪಾಯಿ ಖರ್ಚುಮಾಡಿ ತೋಟ ಉಳಿಸಿಕೊಳ್ಳುವ ಬದಲು, ಇದೇ ಜಾಗದಲ್ಲಿ ಬೇರೆ ಬೆಳೆ ಬೆಳೆಯಬಹುದು. ಬೆಳೆ ಪರಿಹಾರ, ಬೆಂಬಲ ಬೆಲೆಗಳಿಂದ ರೈತನ ಉದ್ಧಾರ ಸಾಧ್ಯವಿಲ್ಲ. ನನ್ನಂತೆ ಬೇರೆ ರೈತರು ಸಾಲ ಮಾಡಿಕೊಳ್ಳುವುದು ಬೇಡ ಎಂಬ ಸಂದೇಶ ಸಾರುವ ಉದ್ದೇಶದಿಂದಲೇ ತೋಟ ತೆಗೆದಿದ್ದೇನೆ' ಎನ್ನುವುದು ರೈತನ ಹತಾಶೆಯ ನುಡಿ.

ನೆರವಿಗೆ ಬದ್ಧ: `ರೈತರು ದುಡುಕಿ ತೋಟವನ್ನೇ ಕಡಿಯುವ ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಕಾಂಗ್ರೆಸ್ ಸರ್ಕಾರ ಮತ್ತು ನಾನು ಸದಾ ರೈತರ ಹಿತಾಸಕ್ತಿ ಕಾಯಲು ಬದ್ಧರಾಗಿದ್ದೇವೆ' ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ರೈತರಲ್ಲಿ ಮನವಿ ಮಾಡಿದ್ದಾರೆ.

ಗುಟ್ಕಾ ನಿಷೇಧ ಅಡಿಕೆ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಗುಟ್ಕಾ ಮಾಡಲು ಅನುಪಯುಕ್ತ ಅಡಿಕೆ ಬಳಸುತ್ತಿದ್ದರು. ಉತ್ತಮ ಅಡಿಕೆಗೆ ಎಂದೆಂದೂ ಬೆಲೆ ಇದೆ. ಅದನ್ನೂ ಮೀರಿ ಬೆಲೆ ಕುಸಿದರೆ ಸರ್ಕಾರ ರೈತರ ನೆರವಿಗೆ ಬರಲಿದೆ ಎಂದು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.