ADVERTISEMENT

‘ಅಣು ಬಾಂಬ್‌ ಚರ್ಚೆಯಿಂದ ಅಶಾಂತಿ’

ರಾಷ್ಟ್ರೀಯ ಜೈನ ವಿದ್ವತ್‌ ಸಮ್ಮೇಳನಕ್ಕೆ ಸಂಸದ ದೇವೇಗೌಡ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 19:15 IST
Last Updated 1 ಅಕ್ಟೋಬರ್ 2017, 19:15 IST
‘ಅಣು ಬಾಂಬ್‌ ಚರ್ಚೆಯಿಂದ ಅಶಾಂತಿ’
‘ಅಣು ಬಾಂಬ್‌ ಚರ್ಚೆಯಿಂದ ಅಶಾಂತಿ’   

ಶ್ರವಣಬೆಳಗೊಳ: ಅಣುಬಾಂಬ್‌ ಪ್ರಯೋಗದ ಕುರಿತು ಉತ್ತರ ಕೊರಿಯಾ ಮತ್ತು ಅಮೆರಿಕ ದೇಶಗಳ ನಾಯಕರ ಹೇಳಿಕೆಗಳು ಜಗತ್ತನ್ನು ಅಶಾಂತಿಗೆ ನೂಕುತ್ತದೆ ಎಂದು ಸಂಸದ ಎಚ್‌.ಡಿ. ದೇವೇಗೌಡ ಆತಂಕ ವ್ಯಕ್ತಪಡಿಸಿದರು.

ಗೊಮ್ಮಟನಗರದಲ್ಲಿ ಐದು ದಿನ ನಡೆಯುವ ರಾಷ್ಟ್ರಮಟ್ಟದ ಜೈನ ವಿದ್ವತ್‌ ಸಮ್ಮೇಳನಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಅಣುಬಾಂಬ್‌ ಪ್ರಯೋಗದ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರಿಂದ ಏನು ಸಾಧಿಸಲು ಸಾಧ್ಯ? ಇದು ಕೇವಲ ನಾಯಕತ್ವಕ್ಕಾಗಿ ನಡೆಯುವ ಹೋರಾಟವಾಗಿದೆ. ಭರತನೊಂದಿಗೆ ನಡೆದ ಯುದ್ಧದಲ್ಲಿ ಬಾಹುಬಲಿ ಗೆದ್ದರೂ ಎಲ್ಲವನ್ನು ತ್ಯಾಗ ಮಾಡಿದ. ಈ ಮಹಾನ್‌ ಪುರುಷನ ಪರಂಪರೆ ಅನುಸರಿಸಬೇಕು. ಮಹಾವೀರ, ಬಾಹುಬಲಿ ಬೋಧಿಸಿದ ಅಹಿಂಸೆ, ಶಾಂತಿ ತತ್ವಗಳನ್ನು ಅನುಸರಿಸುವುದರಿಂದ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಮ್ಮೇಳನಾಧ್ಯಕ್ಷ ಡಾ.ಶ್ರೇಯಾಂಸಕುಮಾರ್‌ ಜೈನ್‌ ಮಾತನಾಡಿ, ‘ಸಾಹಿತ್ಯ, ಸಂಗೀತ, ಸಂಸ್ಕೃತಿ, ಆಗಮ, ಆಧ್ಯಾತ್ಮ ಕ್ಷೇತ್ರಕ್ಕೆ ಜೈನ ವಿದ್ವಾಂಸರು ಮಹತ್ತರ ಕೊಡುಗೆ ಸಲ್ಲಿಸಿದ್ದಾರೆ. ನಿರಂತರ ಪ್ರವಚನ, ಭಾಷಣದ ಜೊತೆಗೆ ಸ್ವಾಧ್ಯಾಯ ಮಾಡುತ್ತಾರೆ. ಜಿನಾಗಮದಲ್ಲಿ ಪ್ರತಿಪಾದಿಸಿದ ಸಿದ್ಧಾಂತಗಳನ್ನು ಪಾಲಿಸುತ್ತಾರೆ’ ಎಂದರು.

ಸಮ್ಮೇಳನಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರನ್ನು ಸಭಾಂಗಣಕ್ಕೆ ಸಾರೋಟಿನಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಜಾನಪದ ಕಲಾತಂಡಗಳು ಮೆರುಗು ನೀಡಿದವು.

ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಲೇಖಕಿ ಡಾ.ಕಮಲಾ ಹಂಪನಾ, ನಿವೃತ್ತ ನ್ಯಾಯಾಧೀಶ ಬಾಲಚಂದ್ರ ವಗ್ಯಾನಿ, ಶಾಸಕ ಸಿ.ಎನ್‌.ಬಾಲಕೃಷ್ಣ, ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಮಹಾಮಸ್ತಕಾಭಿಷೇಕ ಮಹೋತ್ಸವದ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಸರಿತಾ ಎಂ.ಕೆ.ಜೈನ್‌, ಕಾರ್ಯಾಧ್ಯಕ್ಷ ಎಸ್‌.ಜಿತೇಂದ್ರಕುಮಾರ್‌, ಆರ್‌.ಕೆ.ಜೈನ್‌ ಹಾಜರಿದ್ದರು.

ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳಿಂದ 400ಕ್ಕೂ ಹೆಚ್ಚು ವಿದ್ವಾಂಸರು ಹಾಗೂ 150ಕ್ಕೂ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.