ADVERTISEMENT

ಅತಿವೃಷ್ಟಿಯಿಂದ ಒಟ್ಟು ₨ 2,724 ಕೋಟಿ ನಷ್ಟ

ಕೇಂದ್ರ ತಂಡಕ್ಕೆ ರಾಜ್ಯದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 19:59 IST
Last Updated 26 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಿಂದ 119 ಜನ ಸತ್ತಿದ್ದು,  ₨ 2,724 ಕೋಟಿ ಮೊತ್ತದ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅತಿವೃಷ್ಟಿ ಬಗ್ಗೆ ಅಧ್ಯಯನ ನಡೆಸಲು ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡದೊಂದಿಗೆ ಗುರುವಾರ ಗೃಹ ಕಚೇರಿ ‘ಕೃಷ್ಣದಲ್ಲಿ ಚರ್ಚೆ ನಡೆಸಿದ ಬಳಿಕ ಮಾತನಾಡಿ, ಬರ ಪರಿಹಾರಕ್ಕೆ ₨48.20 ಕೋಟಿ ಹಾಗೂ ನೆರೆ ಪರಿಹಾರಕ್ಕೆ ₨81.23 ಕೋಟಿ ಹಣವನ್ನು ರಾಜ್ಯ ಸರ್ಕಾರ ಖರ್ಚು ಮಾಡಿದೆ ಎಂದರು.

ಅತಿವೃಷ್ಟಿ ಅಧ್ಯಯನಕ್ಕಾಗಿ ರಾಜ್ಯಕ್ಕೆ ಬಂದಿರುವ ಎರಡು ತಂಡಗಳು 7 ಜಿಲ್ಲೆಗಳಿಗೆ ಭೇಟಿ ನೀಡಿದ್ದು, ಅಲ್ಲಿನ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿದೆ. ಅಲ್ಲದೆ ರಾಜ್ಯದಲ್ಲಿನ ಅತಿವೃಷ್ಟಿಗೆ ಪರಿಹಾರ ನೀಡುವಂತೆ ಕೋರಿ ರಾಜ್ಯ ಸರ್ಕಾರದ ವತಿಯಿಂದ ಕೇಂದ್ರ ತಂಡಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.  

ಕಳೆದ ಏಪ್ರಿಲ್‌ನಿಂದ 119 ಜನ ಮೃತಪಟ್ಟಿದ್ದು, 259 ಮಂದಿ ಅಂಗವಿಕಲರಾಗಿದ್ದು, 301 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಜೊತೆಗೆ 11,536 ಮನೆಗಳ ಹಾನಿಯಿಂದ ₨54.59 ಕೋಟಿ, 286 ಜಾನುವಾರುಗಳ ಸಾವಿನಿಂದ ₨32 ಲಕ್ಷ ನಷ್ಟವಾಗಿದೆ ಎಂದರು.

1,33,572 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಬೆಳೆ ಹಾನಿಯಿಂದ ₨320 ಕೋಟಿ, 1,16,024 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಹಾನಿಯಿಂದ ₨1,846 ಕೋಟಿ ನಷ್ಟವಾಗಿದೆ. ಇದರಲ್ಲಿ ಕೊಳೆ ರೋಗದಿಂದ 88,408 ಹೆಕ್ಟೇರ್‌ ಪ್ರದೇಶದಲ್ಲಿ ₨ 1,607 ಕೋಟಿ ನಷ್ಟವಾಗಿದೆ ಎಂದು ವಿವರಿಸಿದರು.

5,764 ಕಿ.ಮೀ ರಸ್ತೆ ಹಾನಿಯಿಂದ ₨ 275 ಕೋಟಿ, ಸೇತುವೆ ಮತ್ತು ಸುರಂಗ ಮಾರ್ಗಗಳ ಹಾನಿಯಿಂದ ₨ 65.49 ಕೋಟಿ, 395 ಸಣ್ಣ ನೀರಾವರಿ ಕಾಮಗಾರಿ ಹಾನಿಯಿಂದ ₨ 29.48 ಕೋಟಿ, 395 ನೀರಾವರಿ ಕೆರೆಗಳ ಹಾನಿಯಿಂದ ₨ 19.93 ಕೋಟಿ,1444  ಕುಡಿಯುವ ನೀರಿನ ಯೋಜನೆಗಳಿಂದ ₨ 7.77 ಕೋಟಿ ಹಾಗೂ ವಿದ್ಯುತ್‌ ಸರಬರಾಜು ಲೈನ್‌ಗಳು ಮತ್ತು ಟ್ರಾನ್ಸ್‌ಫಾರ್ಮರ್‌್‌ ಹಾನಿಯಿಂದ ₨ 32.65 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದರು.

ಜೂನ್‌ ಮೊದಲ ವಾರದಿಂದ ಸೆಪ್ಟೆಂಬರ್‌18ರ ವರೆಗೆ ರಾಜ್ಯದಲ್ಲಿ 888 ಮಿ.ಮೀ ಮಳೆಯಾಗಿದ್ದು, 98 ತಾಲ್ಲೂಕುಗಳಲ್ಲಿ ಶೇಕಡ 20ಕ್ಕಿಂತ ಹೆಚ್ಚು, 57 ತಾಲ್ಲೂಕುಗಳಲ್ಲಿ ಶೇಕಡ 20ರಷ್ಟು, 19 ತಾಲ್ಲೂಕುಗಳಲ್ಲಿ ಶೇಕಡ 20ಕ್ಕಿಂತ ಕಡಿಮೆ ಆಗಿದೆ.

ಅತಿವೃಷ್ಟಿಯಿಂದ ತೊಂದರೆಗೀಡಾದ 4,381 ಮಂದಿಗೆ 34 ಪರಿಹಾರ ಕೇಂದ್ರಗಳಲ್ಲಿ ಆಹಾರ ಮತ್ತು ವಸತಿ ಸೌಲಭ್ಯ ಕಲ್ಪಿಸಲು ₨ 79.20 ಲಕ್ಷ ಮತ್ತು ಹಾನಿಗೊಳಗಾದ ಕೆರೆಗಳ ಕಾಮಗಾರಿಗಾಗಿ ₨ 7.48 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

ಅಂದಾಜಿಸಲಾಗಿರುವ ನಷ್ಟಕ್ಕೆ  ರಾಜ್ಯ ವಿಪತ್ತು ನಿರ್ವಹಣಾ ನಿಧಿ ನಿಯಮಗಳ ಪ್ರಕಾರ ಕೇಂದ್ರ ಸರ್ಕಾರದಿಂದ 593.11 ಕೋಟಿ ಪರಿಹಾರ ನೀಡುವಂತೆ ಕೋರಲಾಗಿದೆ. ನೆರೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರ 79.46 ಕೋಟಿಯನ್ನು ಖರ್ಚುಮಾಡಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.