ADVERTISEMENT

ಆರೋಗ್ಯ ಕವಚ ಸೇವೆ ಅಬಾಧಿತ

ತುರ್ತು ಸೇವೆಗಿಲ್ಲ ಅಡ್ಡಿ, ಕೆಎಸ್‌ಆರ್‌ಟಿಸಿ ಚಾಲಕರ ನೆರವು: ಲಕ್ಷ್ಮಿನಾರಾಯಣ

​ಪ್ರಜಾವಾಣಿ ವಾರ್ತೆ
Published 30 ಜನವರಿ 2016, 19:30 IST
Last Updated 30 ಜನವರಿ 2016, 19:30 IST
ಆರೋಗ್ಯ ಕವಚ ಸೇವೆ ಅಬಾಧಿತ
ಆರೋಗ್ಯ ಕವಚ ಸೇವೆ ಅಬಾಧಿತ   

ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ‘108’ ಆರೋಗ್ಯ ಕವಚದ ಕೆಲವು ಸಿಬ್ಬಂದಿ ನಡೆಸುತ್ತಿರುವ ಮುಷ್ಕರವು ತುರ್ತು ಸೇವೆಗಳ ಮೇಲೆ ಪರಿಣಾಮ ಬೀರಿಲ್ಲ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್‌. ಲಕ್ಷ್ಮಿನಾರಾಯಣ ಶನಿವಾರ ಹೇಳಿದರು.

ವಿಕಾಸಸೌಧದಲ್ಲಿ  ಸುದ್ದಿಗೋಷ್ಠಿ ನಡೆಸಿದ ಅವರು, ‘ಶನಿವಾರ ರಾಜ್ಯದಾದ್ಯಂತ ಶೇ 93ರಿಂದ ಶೇ 94ರಷ್ಟು ಪ್ರಕರಣಗಳಲ್ಲಿ ತುರ್ತು ಸೇವೆಯನ್ನು ಒದಗಿಸಿದ್ದೇವೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಆಂಬುಲೆನ್ಸ್‌ಗಳು ಶೇ 100 ರಷ್ಟು ತುರ್ತು ಸೇವೆಗಳನ್ನು ನೀಡಿವೆ’  ಎಂದು ವಿವರಿಸಿದರು.

‘704 ಆಂಬುಲೆನ್ಸ್‌ಗಳ ಪೈಕಿ ರಾಜ್ಯದಾದ್ಯಂತ 670 ಆಂಬುಲೆನ್ಸ್‌ಗಳು ಶನಿವಾರ ಕಾರ್ಯನಿರ್ವಹಿಸಿವೆ. ಬೆಂಗಳೂರಿನಲ್ಲಿ 69ರ ಪೈಕಿ 64 ಆಂಬುಲೆನ್ಸ್‌ಗಳು ಆರೋಗ್ಯ ಸೇವೆ ನೀಡಿವೆ’ ಎಂದು ಮಾಹಿತಿ ನೀಡಿದರು.

ಎರವಲು:  ಸುಮಾರು 350 ಚಾಲಕರು ಮುಷ್ಕರ ನಡೆಸುತ್ತಿದ್ದಾರೆ. ಅವರ ಜಾಗಕ್ಕೆ ಪರ್ಯಾಯವಾಗಿ ಕೆಎಸ್‌ಆರ್‌ಟಿಸಿಯಿಂದ 349 ಚಾಲಕರ ಸೇವೆ ಪಡೆಯಲಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕರೂ ನೆರವಾಗಿದ್ದಾರೆ. ಜಿವಿಕೆ ಇಎಂಆರ್‌ಇ ಸಂಸ್ಥೆಯ ಬಳಿ 163 ಮೀಸಲು ಚಾಲಕರಿದ್ದಾರೆ. ಅವರ ಸೇವೆಯನ್ನೂ ಬಳಸಲಾಗುತ್ತಿದೆ’ ಎಂದರು.

ನೋಟಿಸ್‌:   ಆರೋಗ್ಯ ಕವಚ ಸೇವೆ ನಿರ್ವಹಿಸುತ್ತಿರುವ ಜಿವಿಕೆ ಸಂಸ್ಥೆಯಿಂದ ಈ ಎಲ್ಲ ಪ್ರಕರಣಗಳ ಬಗ್ಗೆ ಇಲಾಖೆ ವಿವರಣೆ ಕೇಳಲಿದೆ. ಈ  ವಿಚಾರವಾಗಿ ಷೋಕಾಸ್‌ ನೋಟಿಸ್‌ ಕೂಡ ಜಾರಿ ಮಾಡಲಾಗುವುದು ಎಂದು ಅವರು ತಿಳಿಸಿದರು.

‘ಎಸ್ಮಾ’ ಇಲ್ಲ: ‘ಅಗತ್ಯ ಬಿದ್ದರೆ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಜಾರಿಗೊಳಿಸಬಹುದು ಎಂದು ಸೂಚಿಸಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಶನಿವಾರ ಪತ್ರ ಬರೆಯಲಾಗಿತ್ತು. ಆದರೆ, ಎಲ್ಲ ಜಿಲ್ಲೆಗಳಲ್ಲಿ ಶೇ 93ರಿಂದ 94ರಷ್ಟು ಪ್ರಮಾಣದಲ್ಲಿ ಸೇವೆ ಒದಗಿಸಲು ನಮಗೆ ಸಾಧ್ಯವಾಗಿರುವುದರಿಂದ ‘ಎಸ್ಮಾ’ ಜಾರಿ ಮಾಡುವ ಅವಶ್ಯಕತೆ ಬಂದಿಲ್ಲ’ ಎಂದು  ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
*
152 ಚಾಲಕರ ವಜಾ
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿವಿಕೆ  ಇಎಂಆರ್ಐ ಸಂಸ್ಥೆಯ ರಾಜ್ಯ ಮುಖ್ಯಸ್ಥ ಅಭಿನವ್‌ ಕೆ. ಜಯರಾಂ, ‘ಜನರಿಗೆ ಇನ್ನಷ್ಟು ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮುಷ್ಕರ ನಿರತ 152 ಚಾಲಕರನ್ನು ಸೇವೆಯಿಂದ ವಜಾ ಮಾಡಲಾಗಿದೆ’ ಎಂದರು.

‘ಮುಷ್ಕರ ನಿರತರೊಂದಿಗೆ ನಾವು ಮಾತುಕತೆ ನಡೆಸುತ್ತಿದ್ದೇವೆ. ನೇಮಕಾತಿ ಆದೇಶದಲ್ಲಿ ಇರುವ ನಿಯಮಗಳಿಗೆ ಬದ್ಧರಾಗುವಂತೆ ಅವರಿಗೆ ಸೂಚಿಸಲಾಗಿದೆ’ ಎಂದರು.
*
ಆಂಬುಲೆನ್ಸ್‌ ಸಿಬ್ಬಂದಿ ವೇತನ ಹೆಚ್ಚಿಸಿ ಜನವರಿ 14ರಂದು ಆದೇಶ ಹೊರಡಿಸಿದ್ದೇವೆ. ಅದಕ್ಕಾಗಿ ₹ 6.67 ಕೋಟಿ ಬಿಡುಗಡೆಯೂ ಮಾಡಿದ್ದೇವೆ. ಈಗ ಜನರಿಗೆ ತೊಂದರೆ ಮಾಡುವುದಕ್ಕಾಗಿ ಅವರು ಮುಷ್ಕರ ನಡೆಸುತ್ತಿದ್ದಾರೆ.
- ಎಂ.ಎನ್‌. ಲಕ್ಷ್ಮಿನಾರಾಯಣ
ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT