ADVERTISEMENT

ಇದುವರೆಗೂ ಸಿಕ್ಕಿದ್ದು ರೂ.11.22 ಕೋಟಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 19:59 IST
Last Updated 23 ಏಪ್ರಿಲ್ 2013, 19:59 IST

ಬೆಂಗಳೂರು: ಮತದಾರರಿಗೆ ಹಂಚಲು ಅಕ್ರಮವಾಗಿ ಸಾಗಿಸುತ್ತಿದ್ದ ಮತ್ತು ಕೆಲವು ಕಡೆ ದಾಸ್ತಾನು ಮಾಡಿದ್ದ ಒಟ್ಟು ರೂ.70.93 ಲಕ್ಷ ನಗದನ್ನು ರಾಜ್ಯದ ವಿವಿಧ ಕಡೆ ಚುನಾವಣಾಧಿಕಾರಿಗಳು ಮಂಗಳವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

ಅಭ್ಯರ್ಥಿಯೊಬ್ಬರಿಗೆ ಸೇರಿದ ಹಣ ಇದೆ ಎಂಬ ಮಾಹಿತಿಯನ್ನು ಆಧರಿಸಿ, ಜಾಗೃತದಳದ ಅಧಿಕಾರಿಗಳು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆಸಿದಾಗ ರೂ.42.5 ಲಕ್ಷ ನಗದು ಪತ್ತೆಯಾಗಿದ್ದು, ಅದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದೂ ಸೇರಿದಂತೆ ಇದುವರೆಗೂ ಒಟ್ಟು ರೂ.11.22 ಕೋಟಿ ನಗದು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ಮಂಗಳವಾರ ಇಲ್ಲಿ ತಿಳಿಸಿದರು. ಮತದಾರರಿಗೆ ಹಂಚಲು ಶೇಖರಿಸಿ ಇಟ್ಟಿದ್ದ ್ಙ 1.9 ಕೋಟಿ ಮೊತ್ತದ ಸೀರೆ ಸೇರಿದಂತೆ ಇತರ ವಸ್ತುಗಳನ್ನು ಇದುವರೆಗೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ನಾರಾಯಣಗೌಡರ ಮನೆಯಲ್ಲಿ ಸಿಕ್ಕ ಹಣದ ಬಗ್ಗೆ ತನಿಖೆ ನಡೆಸಲು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಝಾ ತಿಳಿಸಿದರು.

ಸಾಲದ ಹಣ: ನಗದು ವಶಕ್ಕೆ ತೆಗೆದುಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರಾಯಣ ಗೌಡ ಅವರು ಪ್ರತಿಕ್ರಿಯೆ ನೀಡಿದ್ದು, `ಇದು ಯಾವುದೇ ಅಭ್ಯರ್ಥಿಗೆ ಸಂಬಂಧಿಸಿದ ಹಣ ಅಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

`ನಾಗರಬಾವಿಯಲ್ಲಿನ ನನ್ನ ಮನೆಯ ನವೀಕರಣಕ್ಕಾಗಿ ಅರಸೀಕೆರೆಯ ವೀರಶೈವ ಸಹಕಾರ ಸಂಘದಿಂದ ಸಾಲ ತಂದಿದ್ದ ಹಣವನ್ನು ಮನೆಯಲ್ಲಿ ಇಟ್ಟಿದ್ದೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳೂ ನನ್ನ ಬಳಿ ಇದ್ದು, ಅವುಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸುತ್ತೇನೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಮೊಬೈಲ್ ರಿಚಾರ್ಜ್ ಮೇಲೂ ನಿಗಾ:
ಮೊಬೈಲ್ ದೂರವಾಣಿಗಳಿಗೆ ಕರೆನ್ಸಿ ತುಂಬಿಸುವ ಸಂಬಂಧದ ದೂರುಗಳು ಬೆಂಗಳೂರಿನಿಂದ ಬಂದಿವೆ. ಇದಕ್ಕೆ ಸಂಬಂಧಿಸಿದಂತೆ ಒಂದು ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಎಲ್ಲೆಡೆ ನಿಗಾ ಇಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಝಾ ಹೇಳಿದರು.

ಮಿತಿ ಮೀರಿದರೆ ಕ್ರಮ: ಅಭ್ಯರ್ಥಿಗಳು ಮಾಡುತ್ತಿರುವ ವೆಚ್ಚದ ಬಗ್ಗೆ ಆಯೋಗದ ವೆಚ್ಚ ವೀಕ್ಷಕರು ಪ್ರತ್ಯೇಕ ಲೆಕ್ಕ ಇಡುತ್ತಿದ್ದು, ಅದನ್ನು ಅಭ್ಯರ್ಥಿಗಳು ನೀಡುವ ಲೆಕ್ಕಪತ್ರದ ಜತೆ ಹೊಂದಿಸಿ, ಪರಿಶೀಲಿಸಲಾಗುವುದು. ನಿಗದಿಗಿಂತ ಹೆಚ್ಚು ಖರ್ಚು ಮಾಡಿರುವ ಬಗ್ಗೆ ಲೆಕ್ಕ ಸಿಕ್ಕರೆ ಅಂತಹ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.

`ಆಮಿಷಕ್ಕೆ ಒಳಗಾಗುವ ಮತದಾರರ ವಿರುದ್ಧವೂ ಕ್ರಮ ತೆಗೆದುಕೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ಆದರೆ, ನಾವು ಹಣ ಕೊಡುವವರನ್ನು ಗುರಿಯಾಗಿ ಇಟ್ಟುಕೊಂಡು ಕ್ರಮ ಜರುಗಿಸುತ್ತಿದ್ದೇವೆ. ಇದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.