ADVERTISEMENT

ಉತ್ತಮ ಮಳೆ: ಬತ್ತಿದ ನದಿಗಳಲ್ಲಿ ಹರಿದ ನೀರು

​ಪ್ರಜಾವಾಣಿ ವಾರ್ತೆ
Published 9 ಜೂನ್ 2013, 20:04 IST
Last Updated 9 ಜೂನ್ 2013, 20:04 IST

ಬೆಂಗಳೂರು: ಕೊಡಗು, ಉತ್ತರ ಕನ್ನಡ  ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಶನಿವಾರ ರಾತ್ರಿ, ಭಾನುವಾರ ಉತ್ತಮ ಮಳೆಯಾಗಿದೆ. ಬತ್ತಿ ಹೋಗಿದ್ದ ನದಿಗಳಲ್ಲಿ ನೀರು ಹರಿಯತೊಡಗಿದೆ.

ಕೊಡಗಿನ ಮಡಿಕೇರಿ, ಭಾಗಮಂಡಲ, ಸಂಪಾಜೆ, ಶಾಂತಳ್ಳಿ, ಶ್ರೀಮಂಗಲ ಸೇರಿದಂತೆ ಇತರ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

ಕಾವೇರಿ, ಹಾರಂಗಿ, ಬರಪೊಳೆ, ಹೇಮಾವತಿ, ಚಿಕ್ಲಿಹೊಳೆಯ ನದಿಗಳ ಜಲಾನಯನ ಪ್ರದೇಶಗಳಲ್ಲಿ ಚೆನ್ನಾಗಿ ಮಳೆ ಸುರಿಯುತ್ತಿರುವ ಕಾರಣ ನದಿಗಳಿಗೆ ನೀರು ಬಂದು ಸೇರಿಕೊಳ್ಳುತ್ತಿದೆ. ಮಡಿಕೇರಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಕೂಟು ಹೊಳೆಯಲ್ಲೂ ನೀರಿನ ಸಂಗ್ರಹ ಏರಿಕೆಯಾಗಿರುವುದರಿಂದ ನಗರಕ್ಕೆ ಈಗ ದಿನಂಪ್ರತಿ ನೀರು ಪೂರೈಸಲಾಗುತ್ತಿದೆ.

ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 101.66 ಮಿ.ಮೀ ಸರಾಸರಿ ಮಳೆಯಾಗಿದೆ. ಸಂಪಾಜೆಯಲ್ಲಿ 48.4 ಮಿ.ಮೀ., ಭಾಗಮಂಡಲದಲ್ಲಿ 40.2 ಮಿ.ಮೀ.  ಹಾಗೂ ಮಡಿಕೇರಿಯಲ್ಲಿ 36.8 ಮಿ.ಮೀ. ಮಳೆಯಾಗಿದೆ.

ಹಾರಂಗಿ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟವು 2,859 ಅಡಿಗಳಾಗಿದ್ದು, ಭಾನುವಾರ ಬೆಳಿಗ್ಗೆ 2,801.73
ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಜಲಾಶಯಕ್ಕೆ 193 ಕ್ಯೂಸೆಕ್ ಒಳಹರಿವು ಇದೆ.

ಮಂಗಳೂರಿನಲ್ಲಿ ಶನಿವಾರ ಸಂಜೆ ಮತ್ತು ರಾತ್ರಿ ಭರ್ಜರಿಯಾಗಿ ಸುರಿದ ಮಳೆ ಭಾನುವಾರ ತುಸು ವಿಶ್ರಾಂತಿ ಪಡೆದಿದೆ. ಕಳೆದ 24 ಗಂಟೆಗಳಲ್ಲಿ ನಗರದಲ್ಲಿ 96.8 ಮಿ.ಮೀ. ಮಳೆ ಸುರಿದಿದ್ದು, ಬತ್ತಿ ಹೋಗಿದ್ದ ಹೊಳೆಗಳಲ್ಲಿ ನೀರು ಹರಿಯತೊಡಗಿದೆ.

ಭಾರಿ ಗಾಳಿ, ಮಳೆಯಿಂದ ಸುಳ್ಯ ತಾಲ್ಲೂಕಿನಲ್ಲಿ ಹಲವೆಡೆ ಅಡಿಕೆ ಮರಗಳು ಮುರಿದು ಬಿದ್ದಿವೆ. ಮೊದಲ ಮಳೆಗೇ ರಸ್ತೆಗಳು ಹದಗೆಟ್ಟು ವಾಹನ ಸಂಚಾರಕ್ಕೆ ಧಕ್ಕೆ ಉಂಟಾದ ಹಲವಾರು ನಿದರ್ಶನಗಳು ಜಿಲ್ಲೆಯ ನಾನಾ ಭಾಗಗಳಲ್ಲಿ ಸಂಭವಿಸಿವೆ.

ಬಂಟ್ವಾಳದಲ್ಲಿ 80.41 ಮಿ.ಮೀ., ಪುತ್ತೂರಿನಲ್ಲಿ 61.71, ಬೆಳ್ತಂಗಡಿಯಲ್ಲಿ 71.02, ಸುಳ್ಯದಲ್ಲಿ 57.04, ಕಡಬದಲ್ಲಿ 64.2 ಹಾಗೂ ಮೂಡುಬಿದಿರೆಯಲ್ಲಿ 72.4 ಮಿ.ಮೀ. ಮಳೆಯಾಗಿದೆ.

ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಹ ಭಾನುವಾರ ಮಳೆಯ ಪ್ರಮಾಣ ಕಡಿಮೆಯಾಗಿತ್ತು.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರ ತಾಲ್ಲೂಕುಗಳಲ್ಲಿ ಭಾನುವಾರ ಬೆಳಿಗ್ಗೆ ಧಾರಾಕಾರ ಮಳೆ ಸುರಿದಿದ್ದರೆ ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ ರಾತ್ರಿಯಿಂದಲೂ ಹಲವೆಡೆ ಭಾರಿ ಮಳೆಯಾಗಿದೆ. ಅಲ್ಲದೆ ಬೆಳಗಾವಿ ಜಿಲ್ಲೆಯಲ್ಲಿ ಭಾನುವಾರವೂ ಜಿಟಿಜಿಟಿ ಮಳೆಯಾಗಿದೆ

ಕಾರವಾರದ ಬೈತಖೋಲದಲ್ಲಿರುವ ಮೀನೆಣ್ಣೆ ಘಟಕದ ಚಿಮಣಿಯು ಬಿರುಗಾಳಿ ಹೊಡೆತಕ್ಕೆ ಮುರಿದ ಪರಿಣಾಮ  ಘಟಕದ ಮೇಲ್ಛಾವಣಿ ಹಾಗೂ ಬಾಯ್ಲರ್ ಸೇಫ್ಟಿವಾಲ್‌ಗೆ ಹಾನಿಯಾಗಿದೆ. ಯಂತ್ರಗಳು ಚಾಲನೆಯಲ್ಲಿರುವ ಸಂದರ್ಭದಲ್ಲೇ ಚಿಮಣಿ ಮುರಿದರೂ ಕಾರ್ಮಿಕರು ತಕ್ಷಣ ಯಂತ್ರವನ್ನು ಸ್ಥಗಿತಗೊಳಿಸಿ, ಹೆಚ್ಚಿನ ಅನಾಹುತ ತಪ್ಪಿಸಿದರು. ಭಟ್ಕಳ ತಾಲ್ಲೂಕಿನ ಬೆಂಡೆಕಾನ್ ಎಂಬಲ್ಲಿ ಮಾವಿನಮರವೊಂದು ಕಾರಿನ ಮೇಲೆ ಬಿದ್ದು ಕಾರು ಜಖಂಗೊಂಡಿದೆ, ಪುರಾತನ ಜಂಬರಮಠ ಕೆರೆ ತುಂಬಿದ್ದು, ಏರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೆರೆಯ ಏರಿ ದುರಸ್ತಿಗೆ ತಾಲ್ಲೂಕು ಆಡಳಿತ ಮುಂದಾಗಿದೆ.

ಘಟ್ಟದ ಮೇಲಿನ ತಾಲ್ಲೂಕುಗಳಾದ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಅರೆ ಬಯಲುಸೀಮೆ ತಾಲ್ಲೂಕು ಮುಂಡಗೋಡ ಹಾಗೂ ಹಳಿಯಾಳ ತಾಲ್ಲೂಕುಗಳಲ್ಲೂ ಉತ್ತಮ ಮಳೆಯಾಗಿದೆ. ಬೆಳಗಾವಿ ತಾಲ್ಲೂಕಿನ ಸುತ್ತ ಮುತ್ತ ಹದವಾಗಿ ಮಳೆ ಸುರಿದಿರುವುದರಿಂದ ಬಿತ್ತನೆ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ನಗರದಲ್ಲಿ ಭಾನುವಾರ ಮಧ್ಯಾಹ್ನ ಕೆಲ ಕಾಲ ಸಾಧಾರಣ ಮಳೆಯಾಯಿತು.

ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ಅಲ್ಲಲ್ಲಿ ಬೆಳಿಗ್ಗೆ ಕೆಲಕಾಲ ತುಂತುರು ಮಳೆ ಸುರಿದ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.