ADVERTISEMENT

ಉಪಸಭಾಪತಿಗೆ ಸಚಿವೆಯಾಗುವ ಆಸೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST

ಬೆಂಗಳೂರು: ವಿಧಾನ ಪರಿಷತ್‌ನ ಉಪ ಸಭಾಪತಿಯಾಗಿ ವಿಮಲಾಗೌಡ ಎರಡನೇ ಬಾರಿಗೆ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.ಉಪ ಸಭಾಪತಿ ಸ್ಥಾನಕ್ಕೆ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಸರ್ವಾನುಮತದ ಆಯ್ಕೆಗೆ ಹಾದಿ ಸುಗಮವಾಯಿತು. ಅವರ ಆಯ್ಕೆಯನ್ನು ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಧಿಕೃತವಾಗಿ ಪ್ರಕಟಿಸಿದರು.

`ಶೋಷಣೆಗೆ ಒಳಗಾದ ಮಹಿಳೆಯರ ಪರ ಸದನದ ಹೊರಗೆ ಹಾಗೂ ಒಳಗೆ ದನಿಯೆತ್ತಿ ಹೋರಾಟ ನಡೆಸಿದ ವಿಮಲಾಗೌಡ ಅವರು ಉಪ ಸಭಾಪತಿ ಸ್ಥಾನಕ್ಕೆ ಆಯ್ಕೆಯಾಗಿರುವುದು ಅವರ ವ್ಯಕ್ತಿತ್ವ ಹಾಗೂ ಆ ಸ್ಥಾನದ ಗೌರವವನ್ನು ಹೆಚ್ಚಿಸಿದೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

`ಉಪ ಸಭಾಪತಿ ಸ್ಥಾನದಲ್ಲಿ ಕುಳಿತು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ~ ಎಂದು ಆಯ್ಕೆ ಬಳಿಕ ವಿಮಲಾಗೌಡ ಭರವಸೆ ನೀಡಿದರು.`ಚಿಕ್ಕ ವಯಸ್ಸಿನಲ್ಲಿಯೇ ರಾಜಕೀಯಕ್ಕೆ ಬಂದರೂ ಸ್ಥಾನಮಾನ ಸಿಗಲು ಬಹಳ ಕಾಯಬೇಕಾಯಿತು. ಕಾಲ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಕೆಲಸ ಮಾಡಿದೆ.
 
ನನ್ನ ಮಟ್ಟಿಗೆ ಅದು ನಿಜವಾಗಿದೆ. ಜೆಡಿಎಸ್ ಹಾಗೂ ಬಿಜೆಪಿ ಸೇರಿ ಸರ್ಕಾರ ರಚಿಸಿದಾಗ ಸಚಿವೆ ಆಗಲಿಲ್ಲ. ಬಳಿಕ ಬಿಜೆಪಿ ಸರ್ಕಾರವೇ ಬಂದರೂ ಸಚಿವೆಯಾಗುವ ಯೋಗ ಕೂಡಿಬರಲಿಲ್ಲ. ಆದರೂ, ಎಲ್ಲರೂ ನನ್ನನ್ನು ವಿಮಲಕ್ಕ ಅಂತ ಆತ್ಮೀಯತೆಯಿಂದ ಗುರುತಿಸಿದರು. ಇದು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು~ ಎಂದರು.

ಸಚಿವೆಯಾಗುವ ವಿಶ್ವಾಸ: `ಮುಂದಿನ ಬಾರಿ ಬಿಜೆಪಿ ಸರ್ಕಾರವೇ ಅಸ್ತಿತ್ವಕ್ಕೆ ಬಂದಲ್ಲಿ ನಾನು ಸಭಾಪತಿಯಲ್ಲ, ಸಚಿವೆಯಾಗುತ್ತೇನೆ~ ಎಂದು ವಿಮಲಾಗೌಡ ತಮ್ಮ ಮನದಾಳದ ಆಸೆ ತೋಡಿಕೊಂಡರು. ಈ ಮಾತಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ವೀರಣ್ಣ ಮತ್ತಿಕಟ್ಟಿ, `ಸಚಿವೆ ಬ್ಯಾಡ್ರಿ. ಕೊನೇಪಕ್ಷ ಉಪ ಮುಖ್ಯಮಂತ್ರಿಯಾಗಿ~ ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.