ADVERTISEMENT

ಉಸ್ತುವಾರಿ ಎದುರೇ ಕಾಂಗ್ರೆಸ್ಸಿಗರ ‘ಕೂಗಾಟ’!

ಹೆದ್ದಾರಿಯಲ್ಲೇ ವೇಣುಗೋಪಾಲ್ ಅವರನ್ನು ಭೇಟಿಯಾದ ಮುಖಂಡರು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST
ಉಸ್ತುವಾರಿ ಎದುರೇ ಕಾಂಗ್ರೆಸ್ಸಿಗರ ‘ಕೂಗಾಟ’!
ಉಸ್ತುವಾರಿ ಎದುರೇ ಕಾಂಗ್ರೆಸ್ಸಿಗರ ‘ಕೂಗಾಟ’!   

ಚಿತ್ರದುರ್ಗ: ಸ್ಟೇಡಿಯಂ ರಸ್ತೆಯ ವೀರಸೌಧದ ಒಳಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಎಸಿ.ವೇಣುಗೋಪಾಲ್ ಸಚಿವರು, ಶಾಸಕರು, ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದರೆ, ಮಾಜಿ ಶಾಸಕ ಎ.ವಿ.ಉಮಾಪತಿ ಮತ್ತು ಕೆಪಿಸಿಸಿ ಸದಸ್ಯ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಬೆಂಬಲಿಗರು ಸಭಾಂಗಣದ ಹೊರಗೆ ‘ಘೋಷಣೆ’ ಕೂಗುತ್ತಿದ್ದರು.

‘ಮನೆ ಮನೆ ಕಾಂಗ್ರೆಸ್’ ಕಾರ್ಯಕ್ರಮದ ಸಭೆಗೆ ಮುಂದಾಗುತ್ತಿದ್ದಂತೆ ಕೆಲವರು ಸಭಾಂಗಣದ ಎದುರು ಉಮಾಪತಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಒತ್ತಾಯಿಸಿ ಘೋಷಣೆ ಕೂಗುತ್ತಿದ್ದರು. ಇದೇ ವೇಳೆ ಸಚಿವ ಆಂಜನೇಯಬೆಂಬಲಿಗರು, ಅವರ ಪರ ಘೋಷಣೆ ಕೂಗುತ್ತಾ ಅಖಾಡಕ್ಕೆ ಇಳಿದರು. ಎರಡೂ ಬಣದ ಕಾರ್ಯಕರ್ತರ ಘೋಷಣೆಗಳು ತೀವ್ರಗೊಂಡವು.

ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಇದಕ್ಕೂ ಮುನ್ನ ದಾವಣಗೆರೆಯಿಂದ ಚಿತ್ರದುರ್ಗಕ್ಕೆ ಬರುತ್ತಿದ್ದ ಉಸ್ತುವಾರಿ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ನಗರದ ಹೊರವಲಯದಲ್ಲೇ ಭೇಟಿಯಾದ ಮಾಜಿ ಶಾಸಕ ಎ.ವಿ.ಉಮಾಪತಿ ಮತ್ತು ತಿಪ್ಪೇಸ್ವಾಮಿ ಬೆಂಬಲಿಗರು, ‘ಚಿತ್ರದುರ್ಗ ಕ್ಷೇತ್ರದಿಂದ ಉಮಾಪತಿಗೆ ಟಿಕೆಟ್ ನೀಡುವಂತೆ’ ಮನವಿ ಸಲ್ಲಿಸಿದರು.

ADVERTISEMENT

ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮದ ವೇದಿಕೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್. ಮಂಜುನಾಥ್ ಮತ್ತು ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್‌.ಕೆ.ಸರ್ದಾರ್ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ತಿಳಿದುಬಂದಿದೆ.

***
ವೇದಿಕೆಯಲ್ಲಿ ಕಾಣದ ಸೌಭಾಗ್ಯ !

‘ಮನೆ ಮನೆಗೆ ಕಾಂಗ್ರೆಸ್‌’ ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಕಾಣಿಸಿಕೊಳ್ಳಲಿಲ್ಲ. ಒಂದು ಮೂಲದ ಪ್ರಕಾರ, ದಾವಣಗೆರೆಯಿಂದ ಚಿತ್ರದುರ್ಗಕ್ಕೆ ಬರುವ ಮಾರ್ಗ ಮಧ್ಯೆಯೇ, ವೇಣುಗೋಪಾಲ್ ಅವರನ್ನು ಸೌಭಾಗ್ಯ ಬಸವರಾಜನ್ ಭೇಟಿಯಾಗಿ, ಅಧಕ್ಷರಾಗಿ ಮುಂದುವರಿಯಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.