ADVERTISEMENT

ಕಬಿನಿ: 3.5 ಸಾವಿರ ಕ್ಯೂಸೆಕ್ ನೀರು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:30 IST
Last Updated 3 ಅಕ್ಟೋಬರ್ 2012, 19:30 IST

ಎಚ್.ಡಿ.ಕೋಟೆ: ಕಾಂಗ್ರೆಸ್ ಸಂಸದರ, ಶಾಸಕರ ಹಾಗೂ ರೈತರ ಹೋರಾಟಕ್ಕೆ ಮಣಿದು ತಾಲ್ಲೂಕಿನ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಹರಿಯುತ್ತಿದ್ದ ನೀರಿನ ಪ್ರಮಾಣ ತಗ್ಗಿಸಲಾಗಿದೆ. ಬುಧವಾರ ಮಧ್ಯಾಹ್ನದಿಂದಲೇ 3.5 ಸಾವಿರ ಕ್ಯೂಸೆಕ್ ನೀರನ್ನು ನಿಲ್ಲಿಸಲಾಯಿತು.

ಈ ಮೊದಲು ಜಲಾಶಯದಿಂದ 5 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡಲಾಗುತ್ತಿತ್ತು.

ಚಾಮರಾಜನಗರ ಸಂಸದ ಆರ್. ಧ್ರುವನಾರಾಯಣ್, ಮೈಸೂರು ಸಂಸದ ಎಚ್. ವಿಶ್ವನಾಥ್, ಗುಂಡ್ಲುಪೇಟೆ ಶಾಸಕ ಎಚ್.ಎಸ್. ಮಹದೇವಪ್ರಸಾದ್, ಎಚ್.ಡಿ.ಕೋಟೆ ಶಾಸಕ ಚಿಕ್ಕಣ್ಣ, ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಎಂ. ಸತ್ಯನಾರಾಯಣ್, ಜಿಲ್ಲಾ ಪಂಚಾಯಿತಿ ಸದಸ್ಯೆ ನಂದಿನಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು, ಸ್ಥಳೀಯರು ಪ್ರತಿಭಟನೆ ನಡೆಸಿದ್ದರಿಂದ 3.5 ಸಾವಿರ ಕ್ಯೂಸೆಕ್ ನೀರು ಸ್ಥಗಿತಗೊಳಿಸಲಾಗಿದೆ.

ಜಲಾಶಯ ಪ್ರವೇಶಿಸಲು ಯತ್ನಿಸಿದ ಸಂಸದರು, ಶಾಸಕರನ್ನು ನೀರಾವರಿ ಇಲಾಖೆ ಕಚೇರಿ ಆವರಣದಲ್ಲೇ ಪೊಲೀಸರು ತಡೆದರು. ಜಲಾಶಯದ ನೀರಿನ ಸಂಗ್ರಹದ ವಿವರ ಪಡೆಯಲು ನೀರಾವರಿ ಇಲಾಖೆ ಕಚೇರಿ ಬಳಿಯೇ ಕುಳಿತು ಚರ್ಚಿಸಲಾಯಿತು. ಉಪವಿಭಾಗಾಧಿಕಾರಿ ವಿನೂತ್‌ಪ್ರಿಯ, ತಹಶೀಲ್ದಾರ್ ಶಿವಕುಮಾರಸ್ವಾಮಿ, ಅಧೀಕ್ಷಕ ಎಂಜಿನಿಯರ್ ಎಚ್.ಸಿ. ಶಿವಮೂರ್ತಿ ಮತ್ತು ಕಾರ್ಯಪಾಲಕ ಎಂಜಿನಿಯರ್ ಮರಿಸ್ವಾಮಿ ಅವರು ಮುಖಂಡರ ಜತೆಗೆ ಕೆಲಕಾಲ ಚರ್ಚೆ ನಡೆಸಿದರು.

ಮಾತಿನ ಚಕಮಕಿ:  ಜಲಾಶಯದ ನೀರಿನ ಮಟ್ಟ ಖುದ್ದು ವೀಕ್ಷಣೆಗೆ ತೆರಳಲು ಐ.ಜಿ ರಾಮಚಂದ್ರರಾವ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಆರ್. ದಿಲೀಪ್ ಅವರಿಗೆ ಜನಪ್ರತಿನಿಧಿಗಳು ಮನವಿ ಮಾಡಿದರು. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಅವರು ಅನುಮತಿ ನಿರಾಕರಿಸಿದರು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವಾರಣ ನಿರ್ಮಾಣವಾಯಿತು. ಪೊಲೀಸರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಂತರ ಜನಪ್ರತಿನಿಧಿಗಳು ಮಾತ್ರ ನೀರಿನ ಪ್ರಮಾಣ ವೀಕ್ಷಿಸಬೇಕು. ಮಾಧ್ಯಮದವರು ಬೇಡ ಎಂದು ಪೊಲೀಸರು ಹೇಳಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಾಧ್ಯಮದವರೊಂದಿಗೆ ಪೊಲೀಸರು ವಾಗ್ವಾದ ನಡೆಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೋಹನ್‌ರೆಡ್ಡಿ ಎಲ್ಲರನ್ನು ಸಮಾಧಾನ ಪಡಿಸಿದರು. ಕೊನೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಜಲಾಶಯ ವೀಕ್ಷಣೆಗೆ ಬಿಡಲಿಲ್ಲ, ಶಾಸಕರು ಸಂಸದರು ಮಾತ್ರ ಇಲಾಖೆ ವಾಹನದಲ್ಲಿ ತೆರಳಲು ಒಪ್ಪಿಗೆ ನೀಡಲಾಯಿತು.

ಪಟ್ಟಿಗೆ ಮಣಿದರು:  ಜಲಾಶಯದ ಕ್ರೆಸ್ಟ್ ಗೇಟ್ ಬಳಿ ತೆರಳಿದ ಮುಖಂಡರು ಸ್ಥಳದಲ್ಲಿ ಧರಣಿ ಆರಂಭಿಸಿದರು. ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ನಿಲ್ಲಿಸುವಂತೆ ಪ್ರತಿಭಟಿಸಿದರು. ಒಳ ಹರಿವು ಆಧರಿಸಿ ನೀರನ್ನು ತಮಿಳುನಾಡಿಗೆ ಬಿಡಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಮಣಿದ ಅಧೀಕ್ಷಕ ಎಂಜಿನಿಯರ್ ಎಚ್.ಸಿ. ಶಿವಮೂರ್ತಿ ಮತ್ತು ಕಾರ್ಯಪಾಲಕ ಎಂಜಿನಿಯರ್ ಮರಿಸ್ವಾಮಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾತನಾಡಿದರು. 3.5 ಸಾವಿರ ಕ್ಯೂಸೆಕ್ ನೀರು ನಿಲ್ಲಿಸಲಾಗುವುದು ಎಂದು ಭರವಸೆ ನೀಡಿ ತಕ್ಷಣವೇ ಹರಿವು ನಿಲ್ಲಿಸಿದರು.

`ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರು ದೆಹಲಿಯ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಭೆ ಬಳಿಕ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಪೂರ್ಣ ಪ್ರಮಾಣದ ನೀರು ನಿಲ್ಲಿಸಲು ಒತ್ತಾಯಿಸಲಾಗುವುದು~ ಎಂದು ಸಂಸದ ಎಚ್. ವಿಶ್ವನಾಥ್ ತಿಳಿಸಿದರು.

ಜಲಾಶಯದ ಸ್ಥಿತಿ:  ~ಜಲಾಶಯದಲ್ಲಿ ಈಗ 2,270 ಅಡಿ ವರೆಗೆ ನೀರು ಇದೆ. ಕಬಿನಿ ಬಲದಂಡೆ ನಾಲೆಯ ನೀರು ನಂಬಿಕೊಂಡು 98 ಸಾವಿರ ಎಕರೆಯಲ್ಲಿ ಬತ್ತ ಬಿತ್ತನೆ ಮಾಡಲಾಗಿದೆ. ನೀರಿನ ಮಟ್ಟ 2,265 ಅಡಿಗೆ ತಲುಪಿದರೆ ಬಲದಂಡೆಯ ನಾಲೆಯಲ್ಲಿ ನೀರು ಹರಿಯಲು ಸಾಧ್ಯವಾಗುವುದಿಲ್ಲ. 20 ದಿನಗಳ ಹಿಂದೆ ಈ ಭಾಗದಲ್ಲಿ ಕೃಷಿ ಕೆಲಸ ಆರಂಭವಾಗಿವೆ. ಈ ಬೆಳೆಗೆ ನೀರು ಲಭಿಸುವುದು ಕಷ್ಟವಾಗುತ್ತದೆ~ ಎಂದು ಸಂಸದರು ಮತ್ತು ಶಾಸಕರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

`ನೀರಿನ ಕೊರತೆಯಿಂದ ಕಬಿನಿ ಅಚ್ಚುಕಟ್ಟು ಪ್ರದೇಶದ ಬೆಳೆ ಒಣಗುವ ಸ್ಥಿತಿ ಉಂಟಾಗಲಿದೆ. ಜಲಾಶಯದ ನೀರು ಖಾಲಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರವಾಗುತ್ತದೆ~ ಮುಖಂಡರು ಕಳವಳ ವ್ಯಕ್ತಡಿಸಿದರು.

ದಕ್ಷಿಣ ವಲಯ ಐಜಿ ರಾಮಚಂದ್ರರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ದಿಲೀಪ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೋಹನ್ ರೆಡ್ಡಿ, ಡಿವೈಎಸ್‌ಪಿ ಮುದ್ದುಮಹದೇವಯ್ಯ, ಗಡಿಭದ್ರತಾ ಪಡೆ, ಮಹಿಳಾ ಪೊಲೀಸರು ಸೇರಿದಂತೆ 250ಕ್ಕೂ ಹೆಚ್ಚು ಮಂದಿ ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.