ADVERTISEMENT

ಕೊಂಕಣ ರೈಲ್ವೆಯನ್ನು ಕಟ್ಟಿದ ಕ್ರಾಂತಿಕಾರಿ ಜಾರ್ಜ್‌ ಫರ್ನಾಂಡಿಸ್‌

ರೈಲಿನಲ್ಲಿ ಮಂಗಳೂರು– ಮುಂಬೈ ನಂಟು ಬೆಸೆದರು

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 9:01 IST
Last Updated 29 ಜನವರಿ 2019, 9:01 IST
1978ರ ಜ.21ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಜಾರ್ಜ್‌ ಫರ್ನಾಂಡಿಸ್‌ ಭಾಷಣ. ಪ್ರಧಾನಿ ಮೊರಾರ್ಜಿ ದೇಸಾಯಿ, ಜಗಜೀವನ್‌ ರಾವ್‌, ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಎಚ್.ಡಿ.ದೇವೇಗೌಡ ಇದ್ದಾರೆ.
1978ರ ಜ.21ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಜಾರ್ಜ್‌ ಫರ್ನಾಂಡಿಸ್‌ ಭಾಷಣ. ಪ್ರಧಾನಿ ಮೊರಾರ್ಜಿ ದೇಸಾಯಿ, ಜಗಜೀವನ್‌ ರಾವ್‌, ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಎಚ್.ಡಿ.ದೇವೇಗೌಡ ಇದ್ದಾರೆ.    

ಮಂಗಳೂರು: ತುಳುನಾಡಿನ ಬಂದರು ನಗರ ಮಂಗಳೂರಿನಲ್ಲಿ ಹುಟ್ಟಿ ಮುಂಬೈ ಮಹಾನಗರವನ್ನು ಹೋರಾಟದ ಕರ್ಮಭೂಮಿಯನ್ನಾಗಿಸಿಕೊಂಡು ಬೆಳೆದ ಹಿರಿಯ ಮುತ್ಸದ್ಧಿ ಜಾರ್ಜ್ ಫರ್ನಾಂಡಿಸ್‌, ಅಧಿಕಾರದ ದಂಡ ಹಿಡಿದಿದ್ದ ಅವಧಿಯಲ್ಲಿ ಕೊಂಕಣ ರೈಲ್ವೆ ಸ್ಥಾಪಿಸುವ ಮೂಲಕ ಉಭಯ ಬಂದರು ನಗರಗಳನ್ನು ರೈಲ್ವೆ ಜಾಲದ ಮೂಲಕ ಬೆಸೆದಿದ್ದರು.

ಜಾರ್ಜ್‌ ಫರ್ನಾಂಡಿಸ್‌ ಅವರ ಕನಸಿನ ಕೂಸಾದ ಕೊಂಕಣ ರೈಲ್ವೆ ನಿಗಮ ಈಗ ಹೆಮ್ಮರವಾಗಿ ಬೆಳೆದಿದೆ. ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕವನ್ನು ಬೆಸೆಯುವ 741 ಕಿ.ಮೀ. ಉದ್ದದ ಕೊಂಕಣ ರೈಲ್ವೆ ಮಾರ್ಗದಲ್ಲಿ ಈಗ ನಿತ್ಯವೂ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ಪ್ರತಿದಿನ ಈ ಮಾರ್ಗದಲ್ಲಿ 25 ರೈಲುಗಳು ಸಂಚರಿಸುತ್ತಿವೆ.

ಇವನ್ನೂ ಓದಿ

ADVERTISEMENT

ಕೊಂಕಣ ರೈಲ್ವೆ ಮಾರ್ಗ ನಿರ್ಮಿಸುವ ಮೊದಲು ಮಂಗಳೂರಿನ ಜನರು ರೈಲಿನಲ್ಲಿ ಮುಂಬೈಗೆ ಪ್ರಯಾಣಿಸಬೇಕಿದ್ದರೆ ಬೆಂಗಳೂರು ಅಥವಾ ಬೆಳಗಾವಿ ಮಾರ್ಗದಿಂದ ಹೋಗಬೇಕಿತ್ತು. ಇದರಿಂದ ತೀವ್ರವಾದ ತೊಂದರೆ ಆಗುತ್ತಿತ್ತು. ಸಮಸ್ಯೆಯ ಆಳವನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಜಾರ್ಜ್‌ ಫರ್ನಾಂಡಿಸ್‌, ಮುಂಬೈ– ಮಂಗಳೂರು ನಡುವೆ ನೇರ ರೈಲು ಸಂಪರ್ಕದ ಕುರಿತು ಚಿಂತನೆ ನಡೆಸುತ್ತಿದ್ದ ಹಿರಿಯ ಸಂಸದರ ಜೊತೆ ಸೇರಿಕೊಂಡಿದ್ದರು.

‘1989–90ರ ಅವಧಿಯಲ್ಲಿ ವಿ.ಪಿ.ಸಿಂಗ್‌ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಜಾರ್ಜ್‌ ಫರ್ನಾಂಡಿಸ್‌ ರೈಲ್ವೆ ಸಚಿವರಾಗಿದ್ದರು. ಆಗಲೇ ಅವರು ಮುಂಬೈ– ಮಂಗಳೂರು ನಡುವೆ ನೇರ ರೈಲು ಸಂಪರ್ಕ ಕಲ್ಪಿಸುವ ಪ್ರಸ್ತಾವವನ್ನು ಸಂಸತ್ತಿನ ಮುಂದೆ ಇಟ್ಟಿದ್ದರು. ಆದರೆ, ಕರಾವಳಿಯುದ್ದಕ್ಕೂ ಹಾದು ಹೋಗಿರುವ ಈ ಮಾರ್ಗದ ನಿರ್ಮಾಣಕ್ಕೆ ಹೆಚ್ಚಿನ ಹಣ ಅಗತ್ಯ ಎಂಬ ಕಾರಣವನ್ನು ಮುಂದಿಟ್ಟ ಬಹುಸಂಖ್ಯೆಯ ಸಂಸದರು ಈ ಯೋಜನೆಯನ್ನು ವಿರೋಧಿಸಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಉಡುಪಿ ರೈಲ್ವೆ ಯಾತ್ರಿ ಸಂಘದ ಹಿರಿಯ ಮುಖಂಡ ಆರ್‌.ಎಲ್‌.ಡಯಾಸ್‌.

ಇವನ್ನೂ ಓದಿ

ಕರ್ನಾಟಕದಿಂದ ಹಲವರು ರೈಲ್ವೆ ಮಂತ್ರಿಗಳಾಗಿದ್ದರು. ಯಾರೊಬ್ಬರೂ ಈ ಯೋಜನೆಯತ್ತ ಗಮನಹರಿಸಿರಲಿಲ್ಲ. ಆದರೆ, ಜಾರ್ಜ್ ಫರ್ನಾಂಡಿಸ್‌ ಆಸಕ್ತಿ ತೋರಿದಾಗ ವಿರೋಧ ವ್ಯಕ್ತವಾಯಿತು. ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲೇಬೇಕೆಂಬ ಹಟಕ್ಕೆ ಬಿದ್ದ ಜಾರ್ಜ್‌, ಕೊಂಕಣ ರೈಲ್ವೆ ನಿಗಮ ಸ್ಥಾಪಿಸಿದರು ಎಂದು ತಿಳಿಸಿದರು.

ಜನರ ಹಣದಿಂದ ಯೋಜನೆ: ‘ಕೊಂಕಣ ರೈಲ್ವೆ ನಿಗಮ ಸ್ಥಾಪಿಸೋಣ. ಜನರ ಹಣ ಪಡೆದು ಯೋಜನೆ ಪೂರ್ಣಗೊಳಿಸೋಣ ಎಂಬ ಪ್ರಸ್ತಾವವನ್ನು ಜಾರ್ಜ್‌ ಅವರು ವಿ.ಪಿ.ಸಿಂಗ್ ಅವರ ಮುಂದಿಟ್ಟರು. ಅದಕ್ಕೆ ಸಿಂಗ್ ಒಪ್ಪಿದರು. ತಕ್ಷಣದಿಂದಲೇ ಕೊಂಕಣ ರೈಲ್ವೆ ನಿಗಮ ಕಾರ್ಯಾರಂಭ ಮಾಡಿತು. ಇಲ್ಲವಾದರೆ ಈ ಯೋಜನೆ ಇಂದಿಗೂ ಕನಸಾಗಿಯೇ ಉಳಿಯುತ್ತಿತ್ತು’ ಎಂದು ಡಯಾಸ್‌ ಹೇಳುತ್ತಾರೆ.

ಮೂರು ರಾಜ್ಯಗಳ ಕಡಲ ತಡಿಯಲ್ಲಿ ಹಾದುಹೋಗುವ ಕೊಂಕಣ ರೈಲ್ವೆ ಮಾರ್ಗದಲ್ಲಿ 92 ಸುರಂಗಗಳಿವೆ. 179 ಪ್ರಮುಖ ಸೇತುವೆಗಳ ಮೇಲೆ ಈ ಮಾರ್ಗ ಹಾದುಹೋಗಿದೆ. ಹಿರಿಯ ರೈಲ್ವೆ ತಜ್ಞ ಇ.ಶ್ರೀಧರನ್‌ ನೇತೃತ್ವದಲ್ಲಿ ಕಾರ್ಯಾರಂಭ ಮಾಡಿದ ಕೊಂಕಣ ರೈಲ್ವೆ ನಿಗಮ, 1998ರಲ್ಲಿ ಯೋಜನೆಯನ್ನು ಪೂರ್ಣಗೊಳಿಸಿತು. ಈಗ ನಿತ್ಯ ಎರಡು ಲಕ್ಷಕ್ಕೂ ಹೆಚ್ಚು ಜನರು ಈ ಮಾರ್ಗವನ್ನು ಬಳಸುತ್ತಿದ್ದಾರೆ.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.