ADVERTISEMENT

ಕೊಪ್ಪಳ ಉಪಚುನಾವಣೆ: ಬಿಜೆಪಿ, ಜೆಡಿಎಸ್ ವಿರುದ್ಧ ವರದಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 19:30 IST
Last Updated 24 ಸೆಪ್ಟೆಂಬರ್ 2011, 19:30 IST

ಕೊಪ್ಪಳ: ನಗರದಲ್ಲಿ ಸೆ. 23ರಂದು ಅಲ್ಪಸಂಖ್ಯಾತರ ಸಮಾವೇಶ ಆಯೋಜನೆ ಮಾಡಿದ ಹಿನ್ನೆಲೆಯಲ್ಲಿ ಜೆಡಿಎಸ್ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ಚುನಾವಣಾ ವೀಕ್ಷಕರು ಶನಿವಾರ ವರದಿ ಸಲ್ಲಿಸಿದ್ದಾರೆ.

ಸಮಾವೇಶ ಆಯೋಜಿಸಿದ್ದಕ್ಕೆ ಸಂಬಂಧಿಸಿದಂತೆ ಚುನಾವಣಾ ನೀತಿ ಸಂಹಿತೆ ನಿಗಾ ತಂಡ ಮಾಡಿರುವ ವಿಡಿಯೋ ಚಿತ್ರೀಕರಣ ಹಾಗೂ ಪತ್ರಿಕಾ ವರದಿಗಳು ಸೇರಿದಂತೆ ಪೂರಕ ದಾಖಲೆಗಳ ಸಮೇತ ವರದಿ ಸಲ್ಲಿಸಲಾಗಿದೆ.

ಚುನಾವಣಾ ವೀಕ್ಷಕರು ಆಯೋಗಕ್ಕೆ ಈ ಸಂಬಂಧ ವರದಿ ಸಲ್ಲಿಸಿರುವುದನ್ನು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಖಚಿತಪಡಿಸಿದ್ದಾರೆ.

ಇದಲ್ಲದೆ ಸೆ. 23ರಂದು ನಗರದಲ್ಲಿ ಜರುಗಿದ ಬಿಜೆಪಿ ಕಾರ್ಯಕರ್ತರ ಸಮಾವೇಶ ಕುರಿತಂತೆ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ.

ಮೊದಲು ಪ್ರಚುರಪಡಿಸಿದಂತೆ, ಸದರಿ ಸ್ಥಳದಲ್ಲಿ ಭೋವಿ ಸಮಾಜದ ವತಿಯಿಂದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.

ಆದರೆ, ನಗರಕ್ಕೆ ಭೇಟಿ ನೀಡಿದ್ದ ರಾಜ್ಯ ಚುನಾವಣಾ ಆಯೋಗದ ಮುಖ್ಯಾಧಿಕಾರಿ ಸಿ.ಎಸ್.ಸುರಂಜನ್ ಸದರಿ ಸನ್ಮಾನ ಸಮಾರಂಭವನ್ನು ರದ್ದುಗೊಳಿಸುವಂತೆ ಸೂಚಿಸಿದ್ದರು. ಬಳಿಕ ಅದೇ ಸ್ಥಳದಲ್ಲಿ  ಕಾರ್ಯಕರ್ತರ ಸಮಾವೇಶ ನಡೆಸುವುದಾಗಿ ಬಿಜೆಪಿ ಪರವಾನಗಿ ತೆಗೆದುಕೊಂಡು ಕಾರ್ಯಕ್ರಮವನ್ನೂ ಆಯೋಜನೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಸಮಾವೇಶ ಕುರಿತಂತೆ ಸಮಗ್ರ ದಾಖಲೆಗಳ ಸಮೇತ ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ.

ಎಚ್‌ಡಿಕೆ ವಿರುದ್ಧ ದೂರು ದಾಖಲು
ಕೊಪ್ಪಳ: ಮತ ಯಾಚನೆ ವೇಳೆ ಆರತಿ ತಟ್ಟೆಯಲ್ಲಿ 500 ರೂಪಾಯಿ ನೋಟು ಹಾಕಿದ ಘಟನೆಗೆ ಸಂಬಂಧಿಸಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಮುನಿರಾಬಾದ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 171(ಬಿ) (ಎಚ್) ಹಾಗೂ ಪ್ರಜಾ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 123 (1)ರಡಿ ಪ್ರಕರಣ ದಾಖಲಾಗಿದೆ.

ಪಕ್ಷದ ಅಭ್ಯರ್ಥಿ ಪರ ಮತ ಯಾಚನೆಗೆ ತಾಲ್ಲೂಕಿನ ಕನಕಾಪುರ ತಾಂಡಾಕ್ಕೆ ತೆರಳಿದ್ದ ಕುಮಾರಸ್ವಾಮಿ, ಆರತಿ ಮಾಡುವಾಗ ತಟ್ಟೆಯಲ್ಲಿ 500 ರೂಪಾಯಿ ನೋಟ್ ಹಾಕಿದ್ದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಾಗಿದೆ ಎಂದು ಚುನಾವಣಾಧಿಕಾರಿ ಎಂ.ಶರಣಬಸಪ್ಪ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.