ADVERTISEMENT

ಗಡ್ಡಪ್ಪ ಆರೋಗ್ಯವಾಗಿದ್ದಾರೆ: ಈರೇಗೌಡ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 12:31 IST
Last Updated 31 ಡಿಸೆಂಬರ್ 2018, 12:31 IST
ಈರೇಗೌಡ
ಈರೇಗೌಡ   

ಮಂಡ್ಯ: ‘ಗಡ್ಡಪ್ಪ ಆರೋಗ್ಯವಾಗಿದ್ದು ಪಾರ್ಶ್ವವಾಯುವಿಗೆ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಮೂರು ದಿನಗಳಿಂದ ನಾನೂ ನೊದೆಕೊಪ್ಪಲು ಗ್ರಾಮದಲ್ಲೇ ಇದ್ದು ಅವರ ಆರೋಗ್ಯ ನೋಡಿಕೊಳ್ಳುತ್ತಿದ್ದೇನೆ’ ಎಂದು ತಿಥಿ ಚಿತ್ರಕ್ಕೆ ಚಿತ್ರಕತೆ ಬರೆದ, ನೊದೆಕೊಪ್ಪಲು ಗ್ರಾಮದವರೇ ಆದ ಈರೇಗೌಡ ಹೇಳಿದರು.

‘ಗಡ್ಡಪ್ಪ ನನ್ನ ಸಂಬಂಧಿಯೂ ಆಗಿದ್ದಾರೆ. ಕಳೆದ ತಿಂಗಳೂ ಅವರಿಗೆ ಆರೋಗ್ಯ ಸಮಸ್ಯೆ ಆಗಿತ್ತು, ಆಸ್ಪತ್ರೆಗೆ ತೋರಿಸಿದ್ದೆವು. ಈಗ ಮುಖಕ್ಕೆ ಪಾರ್ಶ್ವವಾಯು ಆಗಿರುವ ಕಾರಣ ತೊದಲುತ್ತಿದ್ದಾರೆ. ಅವರಿಗೆ ಮೈಸೂರಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಚಾರ ತಿಳಿದು ನಾನೂ ಮೂರು ದಿನಗಳ ಹಿಂದೆ ಊರಿಗೆ ಬಂದಿದ್ದೇನೆ. ಕೆಲವರು ಗಡ್ಡಪ್ಪ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ನೋವಾಗಿದೆ’ ಎಂದು ತಿಳಿಸಿದರು.

‘ತಿಥಿ ಚಿತ್ರದ ವೇಳೆ ಅವರಿಗೆ ಹೃದಯಾಘಾತವಾಗಿತ್ತು. ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿಸುವಂತೆ ವೈದ್ಯರು ಮೊದಲು ಸಲಹೆ ನೀಡಿದ್ದರು. ಆದರೆ 80 ವರ್ಷ ವಯಸ್ಸಾಗಿದ್ದ ಕಾರಣ ಅನುಮಾನ ವ್ಯಕ್ತಪಡಿಸಿದ್ದರು. ತಿಥಿ ಚಿತ್ರ ತಂಡ ಅವರ ಚಿಕಿತ್ಸೆ ವೆಚ್ಚ ಭರಿಸಲು ಆಗಲೇ ಸಿದ್ಧವಿತ್ತು. ಆದರೆ ಗಡ್ಡಪ್ಪ ಅವರ ಪುತ್ರಿಯರು ಶಸ್ತ್ರಚಿಕಿತ್ಸೆಗೆ ಒಪ್ಪಲಿಲ್ಲ. ನಂತರ ಅವರು ಆಶ್ಚರ್ಯಕರ ರೀತಿಯಲ್ಲಿ ಹೃದಯಾಘಾತದಿಂದ ಪಾರಾದರು. ಹಲವು ಚಿತ್ರಗಳಲ್ಲಿ ನಟಿಸಿದರು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಚಿಕಿತ್ಸೆ ಕೊಡಿಸಲು ಸಿದ್ಧ: ನಗರದ ರೋಟರಿ ಸಕ್ಕರೆ ನಾಡು ಸಂಘಟನೆ ಗಡ್ಡಪ್ಪ ಅವರಿಗೆ ಚಿಕಿತ್ಸೆ ಕೊಡಿಸಲು ಮುಂದೆ ಬಂದಿದೆ. ‘ನೊದೆಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದೇವೆ. ಸದ್ಯ ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಮುಂದೆ ಏನೇ ಆರೋಗ್ಯ ಸಮಸ್ಯೆ ಎದುರಾದರೂ ನಾವೇ ಅವರಿಗೆ ಚಿಕಿತ್ಸೆ ಕೊಡಿಸುತ್ತೇವೆ’ ಎಂದು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಮಹೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.