ADVERTISEMENT

ಗುಟ್ಕಾ: ಮುಖ್ಯಮಂತ್ರಿ ಹೇಳಿಕೆಗೆ ಬಿಜೆಪಿ ಪಟ್ಟು

​ಪ್ರಜಾವಾಣಿ ವಾರ್ತೆ
Published 5 ಜೂನ್ 2013, 19:59 IST
Last Updated 5 ಜೂನ್ 2013, 19:59 IST
ವಿಧಾನ ಪರಿಷತ್‌ನಲ್ಲಿ ಬುಧವಾರ ಗುಟ್ಕಾ ನಿಷೇಧ ಕುರಿತ ಚರ್ಚೆಯ ವೇಳೆ ಸಚಿವರಾದ ಆರ್.ವಿ. ದೇಶಪಾಂಡೆ, ಶಾಮನೂರು ಶಿವಶಂಕರಪ್ಪ ಮತ್ತು ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಉಪ ಸಭಾಪತಿ ವಿಮಲಾಗೌಡ ಮತ್ತಿತರರು ಚಿತ್ರದಲ್ಲಿದ್ದಾರೆ.	-ಪ್ರಜಾವಾಣಿ ಚಿತ್ರ
ವಿಧಾನ ಪರಿಷತ್‌ನಲ್ಲಿ ಬುಧವಾರ ಗುಟ್ಕಾ ನಿಷೇಧ ಕುರಿತ ಚರ್ಚೆಯ ವೇಳೆ ಸಚಿವರಾದ ಆರ್.ವಿ. ದೇಶಪಾಂಡೆ, ಶಾಮನೂರು ಶಿವಶಂಕರಪ್ಪ ಮತ್ತು ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಉಪ ಸಭಾಪತಿ ವಿಮಲಾಗೌಡ ಮತ್ತಿತರರು ಚಿತ್ರದಲ್ಲಿದ್ದಾರೆ. -ಪ್ರಜಾವಾಣಿ ಚಿತ್ರ   

ಬೆಂಗಳೂರು: ಗುಟ್ಕಾ ನಿಷೇಧದ ಪರಿಣಾಮಗಳನ್ನು ಎದುರಿಸಲು ಅಡಿಕೆ ಬೆಳೆಗಾರರ ನೆರವಿಗೆ ಕೈಗೊಳ್ಳುವ ಕ್ರಮಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉತ್ತರ ನೀಡಬೇಕು ಎಂದು ವಿಧಾನ ಪರಿಷತ್‌ನಲ್ಲಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿಯಿತು.

ರಾಜ್ಯದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ಉತ್ಪನ್ನಗಳ ಉತ್ಪಾದನೆ, ಮಾರಾಟ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಕುರಿತು ಪರಿಷತ್‌ನಲ್ಲಿ ಬುಧವಾರ ಸುದೀರ್ಘ ಚರ್ಚೆ ನಡೆಯಿತು. ಗುಟ್ಕಾ ನಿಷೇಧದ ನಿರ್ಧಾರವನ್ನು ಪಕ್ಷಭೇದ ಮರೆತು ಸ್ವಾಗತಿಸಿದ ಸದಸ್ಯರು, ಜೊತೆಯಲ್ಲೇ ಅಡಿಕೆ ಬೆಳೆಗಾರರ ಬೆಂಬಲಕ್ಕೆ ನಿಲ್ಲುವಂತೆ ಒತ್ತಾಯಿಸಿದರು.

ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದ ಗೌಡ, ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ, ಬಿಜೆಪಿ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಆರ್.ಕೆ.ಸಿದ್ದರಾಮಣ್ಣ, ಗಣೇಶ್ ಕಾರ್ಣಿಕ್, ತಾರಾ ಅನುರಾಧಾ, ಜೆಡಿಎಸ್‌ನ ಇ.ಕೃಷ್ಣಪ್ಪ ಮತ್ತಿತರರು ಗುಟ್ಕಾ ನಿಷೇಧಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.

ಅಡಿಕೆ ಬೆಳೆಗಾರರು ತೆಗೆದುಕೊಂಡಿರುವ ಕೃಷಿ ಸಾಲವನ್ನು ಪೂರ್ಣವಾಗಿ ಮನ್ನಾ ಮಾಡುವುದು, ಶೂನ್ಯ ಬಡ್ಡಿ ದರದಲ್ಲಿ ಹೊಸದಾಗಿ ಸಾಲ ನೀಡುವುದು, ಅಡಿಕೆ ಮಾರುಕಟ್ಟೆಯ ಸ್ಥಿರತೆ ಕಾಯುವುದು, ಗುಟ್ಕಾ ಮತ್ತು ಪಾನ್ ಮಸಾಲ ತಯಾರಿಕಾ ಘಟಕಗಳ ನೌಕರರಿಗೆ ಪರ್ಯಾಯ ಉದ್ಯೋಗ ಕಲ್ಪಿಸುವುದು ಮತ್ತಿತರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚರ್ಚೆ ಅಂತ್ಯಗೊಂಡ ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಉತ್ತರ ನೀಡಲು ಮುಂದಾದರು. ಆದರೆ, ಈ ವಿಷಯದಲ್ಲಿ ಹಣಕಾಸು ಇಲಾಖೆಗೆ ಸಂಬಂಧಿಸಿದ ಅಂಶಗಳು ಇರುವುದರಿಂದ ಮುಖ್ಯಮಂತ್ರಿಯವರೇ ಉತ್ತರ ನೀಡಬೇಕು ಎಂದು ಬಿಜೆಪಿ  ಸದಸ್ಯರು ಪಟ್ಟು ಹಿಡಿದರು. ಸಭಾನಾಯಕ ಎಸ್.ಆರ್. ಪಾಟೀಲ, ಕಾಂಗ್ರೆಸ್ ಹಿರಿಯ ಸದಸ್ಯ ವೀರಣ್ಣ ಮತ್ತಿಕಟ್ಟಿ, ಎಂ.ಸಿ.ನಾಣಯ್ಯ ಮತ್ತಿತರರ ಮನವೊಲಿಕೆ ಬಳಿಕ ಸುಮ್ಮನಾದರು.

ನಂತರ ವಿಸ್ತೃತವಾಗಿ ಉತ್ತರಿಸಿದ ಖಾದರ್, ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಗುಟ್ಕಾ, ಪಾನ್ ಮಸಾಲ ಬಳಕೆಯಿಂದ ಕ್ಯಾನ್ಸರ್ ಮತ್ತಿತರ ಭೀಕರ ರೋಗಿಗಳ ಸಂಖ್ಯೆ ಏರುತ್ತಿದೆ. ನಾಡಿನ ಯುವಜನರನ್ನು ರಕ್ಷಿಸುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಸುಪ್ರೀಂಕೋರ್ಟ್ ಆದೇಶ ನೀಡಿ ಎರಡು ವರ್ಷಗಳಾದರೂ ಹಿಂದಿನ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಸುಪ್ರೀಂಕೋರ್ಟ್ ನಿರ್ದೇಶನವನ್ನು ಪಾಲಿಸಿದೆ ಎಂದರು.

ಆರೋಗ್ಯ ಸಚಿವರ ಉತ್ತರದಿಂದ ಬಿಜೆಪಿ ಸದಸ್ಯರು ಸಮಾಧಾನಗೊಳ್ಳಲಿಲ್ಲ. ಅಡಿಕೆ ಬೆಳೆಗಾರ ರಕ್ಷಣೆಗೆ ಆರ್ಥಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಮುಖ್ಯಮಂತ್ರಿಯವರೇ ಉತ್ತರಿಸಬೇಕು ಎಂದು ಮತ್ತೆ ಒತ್ತಾಯಿಸಿದರು. ಈ ಬೇಡಿಕೆಯನ್ನು ಒಪ್ಪಿಕೊಂಡ ಎಸ್.ಆರ್.ಪಾಟೀಲರು ಬುಧವಾರ ಈ ಕುರಿತು ಮುಖ್ಯಮಂತ್ರಿಯವರು ಪ್ರತಿಕ್ರಿಯೆ ನೀಡುತ್ತಾರೆ ಎಂದು ಭರವಸೆ ನೀಡಿದರು.

ಗೈರುಹಾಜರಿಗೆ ಅಸಮಾಧಾನ
ವಿಧಾನ ಪರಿಷತ್‌ನಲ್ಲಿ ಆಡಳಿತ ಪಕ್ಷದ ಸದಸ್ಯರ ಗೈರು ಹಾಜರಿ ಬುಧವಾರವೂ ಎದ್ದು ಕಂಡುಬಂತು. ಮತ್ತೆ ಈ ಪರಿಸ್ಥಿತಿ ಮರುಕಳಿಸದಂತೆ ಎಚ್ಚರ ವಹಿಸಲು ಆಡಳಿತ ಪಕ್ಷದ ನಾಯಕರಿಗೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸೂಚಿಸಿದರು.

ಮಧ್ಯಾಹ್ನ ಸದನದ ಕಲಾಪ ಆರಂಭವಾದಾಗ ಆಡಳತ ಪಕ್ಷದ ನಾಲ್ವರು ಸದಸ್ಯರು ಮಾತ್ರ ಇದ್ದರು. ಕಾಂಗ್ರೆಸ್ ಸದಸ್ಯರ ಗೈರು ಹಾಜರಿಗೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ, `ಪ್ರತಿಪಕ್ಷದವರೇ ಕೋರಂ ಭರ್ತಿ ಮಾಡಬೇಕೆ? ಇದು ಸರಿಯಲ್ಲ' ಎಂದರು. ಈ ಕುರಿತು ಕೆಲಕಾಲ ಚರ್ಚೆಯೂ ನಡೆಯಿತು. ಮತ್ತೆ ಹೀಗಾಗದಂತೆ ಎಚ್ಚರ ವಹಿಸಲು ಸಭಾಪತಿಗಳು ಸೂಚಿಸಿದರು. ಪಾಟೀಲರು ಈ ಬಗ್ಗೆ ಭರವಸೆಯನ್ನೂ ನೀಡಿದರು.

ಸಿಗರೇಟ್ ನಿಷೇಧಿಸಿ: ತಾರಾ
ಗುಟ್ಕಾ ನಿಷೇಧದಂತೆ ಸಿಗರೇಟ್ ಉತ್ಪಾದನೆ ಮತ್ತು ಮಾರಾಟವನ್ನೂ ನಿಷೇಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ ಬಿಜೆಪಿ ಸದಸ್ಯೆ ತಾರಾ ಅನುರಾಧಾ, ಈ ಬೇಡಿಕೆಯಲ್ಲಿ ತಮ್ಮ ಸ್ವಾರ್ಥವೂ ಇದೆ ಎಂಬುದನ್ನು ಬಹಿರಂಗಪಡಿಸಿದರು.

ಚರ್ಚೆಯಲ್ಲಿ ಪಾಲ್ಗೊಂಡ ಬಹುತೇಕ ಸದಸ್ಯರು ಸಿಗರೇಟ್ ನಿಷೇಧಕ್ಕೆ ಆಗ್ರಹಿಸಿದರು. ಸರ್ಕಾರ ಸಿಗರೇಟ್ ಉತ್ಪಾದಕರ ಪ್ರಭಾವಕ್ಕೆ ಮಣಿಯುತ್ತಿದೆ ಎಂಬ ಟೀಕಾಪ್ರಹಾರ ನಡೆಸಿದರು. ಅಡಿಕೆಯನ್ನು ಬಳಸಿ ಹೊಸ ಉತ್ಪನ್ನಗಳನ್ನು ಉತ್ಪಾದಿಸಬೇಕೆಂಬ ಸಲಹೆ ನೀಡಿದ ತಾರಾ, ತಮ್ಮ ಮಕ್ಕಳೂ ರೈತರಾಗಬೇಕು ಎಂದು ಆಸೆಪಡುವಷ್ಟು ಶಕ್ತಿಯನ್ನು ಅನ್ನದಾತನಿಗೆ ನೀಡಬೇಕು ಎಂದು ಪ್ರತಿಪಾದಿಸಿದರು.`ಸುಪ್ರೀಂಕೋರ್ಟ್ ಸಿಗರೇಟನ್ನೂ ನಿಷೇಧಿಸಿ ಆದಷ್ಟು ಬೇಗ ಆದೇಶ ಹೊರಡಿಸಲಿ. ಅದು ಶೀಘ್ರವಾಗಿ ಜಾರಿಗೂ ಬರಲಿ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT