ADVERTISEMENT

ಗೋಹತ್ಯೆ ನಿಷೇಧವನ್ನು ಇಡೀ ದೇಶದಲ್ಲೇ ಮಾಡಿಸಲಿ: ರಾಮಲಿಂಗಾರೆಡ್ಡಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 8:58 IST
Last Updated 31 ಮಾರ್ಚ್ 2018, 8:58 IST
ಗೋಹತ್ಯೆ ನಿಷೇಧವನ್ನು ಇಡೀ ದೇಶದಲ್ಲೇ ಮಾಡಿಸಲಿ: ರಾಮಲಿಂಗಾರೆಡ್ಡಿ ತಿರುಗೇಟು
ಗೋಹತ್ಯೆ ನಿಷೇಧವನ್ನು ಇಡೀ ದೇಶದಲ್ಲೇ ಮಾಡಿಸಲಿ: ರಾಮಲಿಂಗಾರೆಡ್ಡಿ ತಿರುಗೇಟು   

ಬೆಂಗಳೂರು: ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಮಾಡಿಸುವುದಾಗಿ ಹೇಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಅವರಿಗೆ ಗೋವುಗಳ ಬಗ್ಗೆ ಪ್ರೀತಿ ಇದ್ದರೆ ಇಡೀ ದೇಶದಲ್ಲಿ ಗೋಹತ್ಯೆ ನಿಷೇಧ ಮಾಡಿಸಲಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ಮೋದಿ ಪ್ರಧಾನಿಯಾದ ಬಳಿಕ ಗೋಮಾಂಸ ರಫ್ತಿನಲ್ಲಿ ಭಾರತ ವಿಶ್ವದಲ್ಲೇ 2ನೇ ಸ್ಥಾನಕ್ಕೆ ಜಿಗಿದಿದೆ. ಪ್ರತಿ ವರ್ಷ ಶೇ 14ರಷ್ಟು ಹೆಚ್ಚಳವಾಗಿದೆ‌.  2015-16ನೇ ಸಾಲಿನಲ್ಲಿ ₹ 26,682 ಕೋಟಿ ಆದಾಯ ಕೇಂದ್ರ ಸರ್ಕಾರಕ್ಕೆ ಬಂದಿದೆ. ಅಷ್ಟೊಂದು ಕಾಳಜಿ ಇದ್ದರೆ ಮೊದಲು ಇದನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದರು.

ADVERTISEMENT

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಗೋಮಾಂಸ ರಫ್ತಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಈ ಕಂಪನಿಗಳಲ್ಲಿ ಬಿಜೆಪಿ ನಾಯಕರೇ ಪಾಲುದಾರರಾಗಿರುವ ಆರೋಪಗಳಿವೆ. ಅಮಿತ್ ಶಾ ಮತ್ತು ಆದಿತ್ಯನಾಥ ಮೊದಲು ಇದನ್ನು ತಡೆಯಲಿ ಎಂದರು.

ಗೋಹತ್ಯೆ ಮಾತ್ರವಲ್ಲ ಎಲ್ಲಾ ಪ್ರಾಣಿಗಳ ಹತ್ಯೆ ನಿಲ್ಲಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.

ಸಂಘ ಪರಿವಾರದಿಂದ 22 ಕೊಲೆ
ಸಂಘ ಪರಿವಾರದ ಕಾರ್ಯಕರ್ತರಿಂದ ರಾಜ್ಯದಲ್ಲಿ 22 ಜನರ ಕೊಲೆಯಾಗಿದೆ. ಈ ಬಗ್ಗೆ ಏಕೆ ಅಮಿತ್ ಶಾ ಆದಿಯಾಗಿ ಬಿಜೆಪಿಯ ಯಾರೊಬ್ಬರೂ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.

ಹಿಂದು ಕಾರ್ಯಕರ್ತರ ಹತ್ಯೆ ಮಾಡಿದವರು ಪಾತಾಳದಲ್ಲಿ ಅಡಗಿದ್ದರು ಬಿಡುವುದಿಲ್ಲ ಬಂಧಿಸುತ್ತೇವೆ ಎಂದು ಶಾ ಹೇಳಿದ್ದಾರೆ. ಬಂದಿಸಲು ಇವರು ಯಾರು ಎಂದು ಪ್ರಶ್ನಿಸಿದ ರಾಮಲಿಂಗಾರೆಡ್ಡಿ, ಅವರೆಲ್ಲರನ್ನೂ ನಾವು ಈಗಾಗಲೇ ಬಂಧಿಸಿ ಜೈಲಿಗೆ‌ ಕಳಿಸಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.