ಬೆಂಗಳೂರು: ರಾಜ್ಯದ ಎರಡನೇ ಉಪ ಲೋಕಾಯುಕ್ತರಾಗಿ ನೇಮಗೊಂಡಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಗುರುವಾರ ಕಚೇರಿಯನ್ನು ತೆರವು ಮಾಡಿದರು. ನೇಮಕಾತಿಯನ್ನು ಅನೂರ್ಜಿತಗೊಳಿಸಿ ಹೈಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಅವರು ಕಚೇರಿಯಿಂದ ನಿರ್ಗಮಿಸಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಆರ್. ಗುರುರಾಜನ್ ಅವರು ಕಳೆದ ಅಕ್ಟೋಬರ್‌ನಲ್ಲಿ ರಾಜೀನಾಮೆ ನೀಡಿದ್ದರು. ಬಳಿಕ ಎರಡನೇ ಉಪ ಲೋಕಾಯುಕ್ತರ ಹುದ್ದೆ ಖಾಲಿ ಉಳಿದಿತ್ತು. ಚಂದ್ರಶೇಖರಯ್ಯ ಅವರನ್ನು ಈ ಹುದ್ದೆಗೆ ನೇಮಕ ಮಾಡಿ ಜನವರಿ 21ರಂದು ಆದೇಶ ಹೊರಡಿಸಲಾಗಿತ್ತು.ಜ.22ರಂದು ಅವರು ಪ್ರಮಾಣವಚನ ಸ್ವೀಕರಿಸಿದ್ದರು.
ತಮ್ಮ ಗಮನಕ್ಕೆ ತಾರದೇ ಚಂದ್ರಶೇಖರಯ್ಯ ಅವರನ್ನು ಉಪ ಲೋಕಾಯುಕ್ತರ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಪತ್ರ ಬರೆದಿದ್ದರು. ನಂತರ ಉಪ ಲೋಕಾಯುಕ್ತರ ನೇಮಕಾತಿ ಪ್ರಕ್ರಿಯೆ ವಿವಾದಕ್ಕೆ ಒಳಗಾಗಿತ್ತು. ಚಂದ್ರಶೇಖರಯ್ಯ ಅವರ ನೇಮಕಾತಿಯನ್ನೇ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಚಂದ್ರಶೇಖರಯ್ಯ ಅವರ ನೇಮಕಾತಿಯನ್ನು ಅನೂರ್ಜಿತಗೊಳಿಸಿ ಏಪ್ರಿಲ್ 3ರಂದು ತೀರ್ಪು ನೀಡಿತ್ತು. ತೀರ್ಪು ಪ್ರಕಟವಾದ ಬಳಿಕ ಅವರು ಕಚೇರಿಗೆ ಬಂದಿರಲಿಲ್ಲ. ಗುರುವಾರ ಮಧ್ಯಾಹ್ನ ಕಚೇರಿಗ ಬಂದ ಅವರು, ತಾವು ತಂದಿರಿಸಿದ್ದ ಕೆಲ ಖಾಸಗಿ ವಸ್ತುಗಳನ್ನು ತೆಗೆದುಕೊಂಡು ಕಚೇರಿಯಿಂದ ನಿರ್ಗಮಿಸಿದರು.
ಕಚೇರಿ ತೆರವು ಮಾಡುವ ಮುನ್ನ ಚಂದ್ರಶೇಖರಯ್ಯ ಅವರು ಲೋಕಾಯುಕ್ತದ ಕೆಲವು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದರು. ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ತಾವು ಕಚೇರಿ ತೆರವು ಮಾಡುತ್ತಿರುವುದಾಗಿ ಅವರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.