ವಿಜಾಪುರ: ಇಲ್ಲಿಯ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರದ್ದು ‘ಜಮೀನ್ದಾರಿ’ ಕುಟುಂಬ. ರಮೇಶ ಹಾಗೂ ಪುತ್ರರಾದ ವಿನೋದ ಮತ್ತು ಆನಂದ ಹೆಸರಿನಲ್ಲಿ 150.32 ಎಕರೆ ಜಮೀನು ಇದೆ.
ರಮೇಶ ಅವರು ಬೆಂಗಳೂರು ಉತ್ತರ ತಾಲ್ಲೂಕು ಶಾಮರಾಜಪುರದಲ್ಲಿ 5 ಎಕರೆ ಮತ್ತು ವಿಜಾಪುರ ತಾಲ್ಲೂಕು ಭೂತನಾಳ, ಅರಕೇರಿ, ಇಂಡಿ ತಾಲ್ಲೂಕಿನ ಅಥರ್ಗಾಗಳಲ್ಲಿ ಒಟ್ಟು 50.25 ಎಕರೆ ಹೀಗೆ ಒಟ್ಟಾರೆ 55.25 ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಅವರ ಪುತ್ರ ವಿನೋದ 55.37 ಎಕರೆ ಮತ್ತು ಆನಂದ 39.10 ಎಕರೆ ಕೃಷಿ ಭೂಮಿಯ ಒಡೆಯರು. ಈ ಎಲ್ಲ ಕೃಷಿ ಜಮೀನುಗಳ ಮೌಲ್ಯ ₨1.85 ಕೋಟಿ ಎಂದು ಉಲ್ಲೇಖಿಸಿದ್ದಾರೆ.
ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಮಾಹಿತಿ ನೀಡಿದ್ದಾರೆ. ರಮೇಶ ಜಿಗಜಿಣಗಿ ಉದ್ದಿಮೆದಾರರೂ ಹೌದು. ಹಂಪಿ ಹೆರಿಟೇಜ್ ವೈನ್ ತಯಾರಿಕಾ ಕಾರ್ಖಾನೆಯಲ್ಲಿ ₨2.31 ಕೋಟಿ ಹೂಡಿಕೆ ಮಾಡಿದ್ದಾರೆ. ಬೆಂಗಳೂರಿನ ಆರ್.ಟಿ. ನಗರ ಮತ್ತು ಗಂಗೇನಹಳ್ಳಿಯಲ್ಲಿ ತಲಾ ಒಂದು ಮನೆ, ಸಂಜಯ ನಗರದಲ್ಲಿ ಎರಡು ಫ್ಲ್ಯಾಟ್, ವಿಜಾಪುರದಲ್ಲಿ ಎರಡು ನಿವೇಶನ ಹೊಂದಿದ್ದಾರೆ. ಆದರೆ, ಅವುಗಳ ವಿಸ್ತೀರ್ಣ ಎಷ್ಟು ಎಂಬುದು ಗೊತ್ತಿಲ್ಲ ಎಂದು ನಮೂದಿಸಿದ್ದಾರೆ. ಇವರ ವಾರ್ಷಿಕ ಸಂಪಾದನೆ ₨24.73 ಲಕ್ಷ.
ತಂದೆಗೆ ಹೋಲಿಸಿದರೆ ಮಕ್ಕಳೇ ಬಡವರು!: ರಮೇಶ ಒಟ್ಟಾರೆ ₨5.43 ಕೋಟಿ ಆಸ್ತಿ ಹೊಂದಿದ್ದರೆ ಅವರ ಇಬ್ಬರ ಮಕ್ಕಳ ಆಸ್ತಿಯ ಮೌಲ್ಯ ₨1.58 ಕೋಟಿ. ತಂದೆಯ ಬಳಿ ₨2.48 ಲಕ್ಷ ಮೌಲ್ಯದ 7 ತೊಲ ಚಿನ್ನ, ₨1.16 ಲಕ್ಷ ಮೌಲ್ಯದ ಎರಡು ಕೆ.ಜಿ. ಬೆಳ್ಳಿ ಇದ್ದರೆ, ಮಕ್ಕಳಲ್ಲಿ ಯಾವುದೇ ಆಭರಣ ಇಲ್ಲ. ತಂದೆ ಇತರರಿಗೆ ₨51.07 ಲಕ್ಷ ಸಾಲ ನೀಡಿದ್ದಾರೆ. ₨37.05 ಲಕ್ಷ ಸಾಲವನ್ನೂ ಮಾಡಿದ್ದಾರೆ. ಆದರೆ, ಮಕ್ಕಳ ಹೆಸರಿನಲ್ಲಿ ಸಾಲ ಇಲ್ಲ.
ಈ ಕುಟುಂಬದ ಬಳಿ ಒಂದು ಜೀಪು, ಎರಡು ಕಾರು, ಒಂದು ಸ್ಕೂಟರ್ ಹೀಗೆ ₨19.12 ಲಕ್ಷ ಮೌಲ್ಯದ ವಾಹನಗಳಿವೆ.
ಬಿ.ಎ. ಪದವೀಧರರಾಗಿದ್ದರೂ ರಮೇಶ ಜಿಗಜಿಣಗಿ ಅವರು ಇ–ಮೇಲ್ ಐಡಿ ಹೊಂದಿಲ್ಲ! ಯಾವುದೇ ಜೀವ ವಿಮೆ ಮಾಡಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.