ADVERTISEMENT

ತುಮಕೂರು ಡಿಎಚ್‌ಒಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST

>ಬೆಂಗಳೂರು: ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಯುಗಾದಿ ಹಬ್ಬದ ದಿನ (ಏ.11) ವೈದ್ಯರೆಲ್ಲ ಒಟ್ಟಿಗೆ ರಜೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಮದನಗೋಪಾಲ್ ತಿಳಿಸಿದರು.

ವೈದ್ಯರು ರಜೆ ಹಾಕಿ ಯುಗಾದಿ ಹಬ್ಬಕ್ಕೆ ತೆರಳಿದ್ದ ಕಾರಣ, ಆ ದಿನ ಚಿಕಿತ್ಸೆ ದೊರೆಯದೆ ಗರ್ಭಿಣಿಯೊಬ್ಬರು ಬೀದಿಗೆ ಬಿದ್ದ ವರದಿ ಇದೇ 13ರಂದು `ಪ್ರಜಾವಾಣಿ' ಯಲ್ಲಿ ವರದಿಯಾಗಿತ್ತು. ಈ ವರದಿ ಆಧರಿಸಿ ಜಿಲ್ಲಾ ಆರೋಗ್ಯಾಧಿಕಾರಿಗೆ ನೋಟಿಸ್ ಜಾರಿ ಮಾಡಿ, ವಿವರಣೆ ಪಡೆಯಲಾಗುವುದು ಎಂದು ಹೇಳಿದರು.

ಈ ಆಸ್ಪತ್ರೆಯಲ್ಲಿ ಒಟ್ಟು ಹತ್ತು ವೈದ್ಯರ ಹುದ್ದೆಗಳಿವೆ. ಆದರೆ, ಐದು ಹುದ್ದೆಗಳು ಖಾಲಿ ಇವೆ. ಐದು ಜನ ವೈದ್ಯರು ಮಾತ್ರ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ ರಜೆ, ಹಬ್ಬದ ದಿನವಾದರೂ, ಎಲ್ಲ ವೈದ್ಯರು ಒಟ್ಟಿಗೆ ರಜೆ ಹಾಕುವಂತಿಲ್ಲ. ಕನಿಷ್ಠ ಒಬ್ಬ ವೈದ್ಯರಾದರೂ ಇರಬೇಕಾಗುತ್ತದೆ. ವೈದ್ಯರಿಗೆ ಪಾಳಿ ಪ್ರಕಾರ ಕೆಲಸ ಹಂಚಿಕೆ ಮಾಡಲಾಗಿರುತ್ತದೆ ಎಂದರು.

ಅಗತ್ಯ ಸೇವೆಗಳ ವ್ಯಾಪ್ತಿಯಲ್ಲಿ ವೈದ್ಯರು ಬರುತ್ತಾರೆ. ಹೀಗಾಗಿ ಸರ್ಕಾರಿ ರಜಾ ದಿನಗಳಲ್ಲೂ ಪಾಳಿ ಪ್ರಕಾರ ಕಾರ್ಯನಿರ್ವಹಿಸಬೇಕಾಗುತ್ತದೆ. ಆ ದಿನ ಒಬ್ಬ ವೈದ್ಯರನ್ನೂ ಉಳಿಸಿಕೊಳ್ಳದೆ, ಎಲ್ಲರಿಗೂ ಹೇಗೆ ರಜೆ ನೀಡಲಾಯಿತು ಎಂಬ ಬಗ್ಗೆ ವಿವರಣೆ ನೀಡುವಂತೆ ಆರೋಗ್ಯಾಧಿಕಾರಿಗೆ ಸೂಚಿಸಲಾಗುವುದು. ಅವರಿಂದ ಉತ್ತರ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.