ADVERTISEMENT

ದಾವಣಗೆರೆ ವಿವಿ: 9 ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭ

ವೃತ್ತಿಪರ ಸ್ನಾತಕ ಪದವಿ ಕೋರ್ಸ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 15:28 IST
Last Updated 18 ಜೂನ್ 2018, 15:28 IST
ದಾವಣಗೆರೆ ವಿವಿ: 9 ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭ
ದಾವಣಗೆರೆ ವಿವಿ: 9 ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭ   

ದಾವಣಗೆರೆ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಿವಗಂಗೋತ್ರಿ ಕ್ಯಾಂಪಸ್‌ನಲ್ಲಿ 9 ಸ್ನಾತಕೋತ್ತರ ಅಧ್ಯಯನ ವಿಭಾಗ ಹಾಗೂ ಚಿತ್ರದುರ್ಗದ ಅಧ್ಯಯನ ಕೇಂದ್ರದಲ್ಲಿ ವಿಜ್ಞಾನ ನಿಕಾಯದ ಮೂರು ಸ್ನಾತಕೋತ್ತರ ಅಧ್ಯಯನ ವಿಭಾಗಗಳನ್ನು ಆರಂಭಿಸಲಾಗುವುದು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಶರಣಪ್ಪ ಹಲಸೆ ಪ್ರಕಟಿಸಿದರು.

ವಿ.ವಿ. ಕ್ಯಾಂಪಸ್‌ನಲ್ಲಿ ಹಿಂದಿ, ಉರ್ದು, ಕ್ರಿಮಿನಾಲಜಿ, ಸೈಕಾಲಜಿ, ಸಂಗೀತ, ಪರ್ಫಾರ್ಮಿಂಗ್ ಆರ್ಟ್ಸ್‌, ಫ್ಯಾಷನ್ ಟೆಕ್ನಾಲಜಿ, ಪರಿಸರ ವಿಜ್ಞಾನ ಹಾಗೂ ಯೋಗ ವಿಜ್ಞಾನ ವಿಷಯಗಳಲ್ಲಿ ಸ್ನಾತಕೋತ್ತರ ವಿಭಾಗಗಳನ್ನು ತೆರೆಯಲಾಗುವುದು. ಚಿತ್ರದುರ್ಗದಲ್ಲಿ ಗಣಿತ, ಕಂಪ್ಯೂಟರ್‌ ಸೈನ್ಸ್‌ ಮತ್ತು ಪ್ರಾಣಿವಿಜ್ಞಾನ ಸ್ನಾತಕೋತ್ತರ ವಿಭಾಗಗಳನ್ನು ಆರಂಭಿಸಲಾಗುವುದು. ವಿಶ್ವವಿದ್ಯಾಲಯದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಕೆಲ ವೃತ್ತಿಪರ ಸ್ನಾತಕ ಪದವಿ ಕೋರ್ಸ್‌ಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ವಿಭಾಗಕ್ಕೆ ಅಗತ್ಯ ಬೋಧನಾ ಸಹಾಯಕರ ಹಾಗೂ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗಳನ್ನು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿ.ವಿ.ಯ ಕ್ಯಾಂಪಸ್‌ನಲ್ಲಿ ವಿಜ್ಞಾನ ಹಾಗೂ ಕಲಾ ವಿಭಾಗಗಳಲ್ಲಿನ ಮೊದಲ ಮಹಡಿ ನಿರ್ಮಾಣ ಕಾರ್ಯ ಜುಲೈ ಅಂತ್ಯದೊಳಗೆ ಪೂರ್ಣಗೊಳ್ಳಲಿದ್ದು, ಹೊಸ ವಿಭಾಗಗಳಿಗೆ ಬೋಧನಾ ಕೊಠಡಿಗಳು ಲಭ್ಯವಾಗಲಿವೆ ಎಂದರು.

ADVERTISEMENT

ದ್ವಿ–ಪದವಿ ಪದ್ಧತಿ:

ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಹೆಚ್ಚುವರಿ ಪದವಿ ಕೋರ್ಸ್‌ಗಳ ಅಧ್ಯಯನ ಮಾಡಲು ದ್ವಿ–ಪದವಿ ಪದ್ಧತಿಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಒಂದು ವರ್ಷ ಅವಧಿಯ ಪಿ.ಜಿ. ಡಿಪ್ಲೊಮಾ ಕೋರ್ಸ್‌ಗಳನ್ನು ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗುವುದು. ಪ್ರಸಕ್ತ ಸಾಲಿನಿಂದ ಒಂದು ವರ್ಷದ ಫುಡ್‌ ಅಂಡ್‌ ನ್ಯೂಟ್ರಿಶನ್ಸ್‌ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ ಹಾಗೂ ಅಲ್ಪಾವಧಿಯ ಫ್ಯಾಷನ್‌, ಸಂಗೀತ, ನೃತ್ಯ ವಿಷಯದಲ್ಲಿ ಸ್ನಾತಕ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಲಾಗುವುದು ಎಂದು ಹಲಸೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.