ADVERTISEMENT

‘ದುಬಾರಿ ದರದಲ್ಲಿ ಸೋಲಾರ್‌ ದೀಪ, ಲಾಟೀನು ಖರೀದಿ’

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 19:30 IST
Last Updated 15 ಜೂನ್ 2018, 19:30 IST

ಬೆಂಗಳೂರು: ‘ಉದ್ಯೋಗ ಮತ್ತು ತರಬೇತಿ ಇಲಾಖೆ (ಡಿಇಟಿ), ಐಟಿಐಗಳಿಗೆ ಪೂರೈಸಿರುವ ಸೋಲಾರ್‌ ಲಾಟೀನು ಹಾಗೂ ಬೀದಿ ದೀಪಗಳಿಗೆ ಮಾರುಕಟ್ಟೆಗಿಂತ ದುಬಾರಿ ದರ ಪಾವತಿಸಿರುವುದರಿಂದ ₹ 4.77 ಕೋಟಿ ಹೆಚ್ಚುವರಿ ಹೊರೆ ಆಗಿದೆ’ ಎಂದು ರಾಜ್ಯದ ‍ಪ್ರಧಾನ ಲೇಖಪಾಲರ ಕಚೇರಿ ಸಿದ್ಧಪಡಿಸಿರುವ ಪರಿಶೀಲನಾ ವರದಿ ಹೇಳಿದೆ.

ಪ್ರಧಾನ ಲೇಖಪಾಲಕರ ಕಚೇರಿಯು ಉದ್ಯೋಗ ಹಾಗೂ ತರಬೇತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಈ ವಿಷಯ ಬಹಿರಂಗವಾಗಿದೆ. ಮಾಹಿತಿ ಹಕ್ಕು ಕಾರ್ಯಕರ್ತ ಎಸ್‌. ಬಸವರಾಜು ಅವರಿಗೆ ಈ ಪತ್ರ ಲಭ್ಯವಾಗಿದೆ.

ಉದ್ಯೋಗ ಮತ್ತು ತರಬೇತಿ ಇಲಾಖೆ ಸೋಲಾರ್‌ ಲಾಟೀನು ಹಾಗೂ ಸೋಲಾರ್‌ ಬೀದಿ ದೀಪಗಳನ್ನು ನೇರವಾಗಿ ಖರೀದಿಸಲು ಅವಕಾಶ ವಿದ್ದರೂ ’ಕಿಯೊನಿಕ್ಸ್‌’ ಮೂಲಕ ಅಧಿಕ ದರ ಪಾವತಿಸಿ ಪಡೆಯಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ADVERTISEMENT

ಸರ್ಕಾರಿ ಮತ್ತು ಅನುದಾನಿತ ಐಟಿಐಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ  2015–16ನೇ ಸಾಲಿನಲ್ಲಿ ವಿತರಿಸಲು 18,458 ಲಾಟೀನುಗಳನ್ನು, ಪ್ರತಿ ಲಾಟೀನಿಗೆ ₹ 5,124 ದರದಲ್ಲಿ ಖರೀದಿಸಿದೆ. ಆದರೆ, ಇದೇ ನಿರ್ದಿಷ್ಟತೆಗಳನ್ನು ಹೊಂದಿರುವ ಲಾಟೀನುಗಳನ್ನು ಕಿಯೊನಿಕ್ಸ್‌ ₹ 2,700ಕ್ಕೆ ಬೇರೆ ಇಲಾಖೆಗಳಿಗೆ ಸರಬರಾಜು ಮಾಡಿದೆ. ಆದರೆ, ಇದರಲ್ಲಿ ಚಾರ್ಜರ್‌ ಮಾತ್ರ ಸೇರಿರಲಿಲ್ಲ ಎಂದು ಹೇಳಲಾಗಿದೆ.

ಇಲಾಖೆ ಕಿಯೊನಿಕ್ಸ್‌ ಮುಖಾಂತರ ಖರೀದಿಸಿರುವ ಲಾಟೀನುಗಳಿಗೆ ₹ 4.48 ಕೋಟಿ ಅಧಿಕವಾಗಿ ಪಾವತಿಸಲಾಗಿದೆ. ಸಾಮಾನ್ಯವಾಗಿ ಕಿಯೊನಿಕ್ಸ್‌ ಮಾರುಕಟ್ಟೆ ದರದ ಮೇಲೆ ಶೇ 5ರಷ್ಟು ಸೇವಾ ಶುಲ್ಕ ಇಟ್ಟುಕೊಂಡು ಪೂರೈಕೆ ಮಾಡಬೇಕು ಎಂದೂ ತಿಳಿಸಲಾಗಿದೆ.

77 ಐಟಿಐಗಳಿಗೆ 1.99 ಕೋಟಿ ವೆಚ್ಚದಲ್ಲಿ 381 ಸೋಲಾರ್‌ ಬೀದಿ ದೀಪಗಳನ್ನು ಪೂರೈಸಲಾಗಿದೆ. ಈ ದೀಪಗಳಿಗೆ ಕಿಯೊನಿಕ್ಸ್‌ ₹ 68,501 ದರ ಸೂಚಿಸಿತ್ತು. ಚರ್ಚೆಯ ಬಳಿಕ ₹ 67,816 ಕ್ಕೆ ಒಪ್ಪಲಾಯಿತು.

ಇದೇ ನಿರ್ದಿಷ್ಟತೆ ಹೊಂದಿರುವ ಸೋಲಾರ್‌ ಬೀದಿ ದೀಪಗಳನ್ನು 2013 ಜುಲೈನಿಂದ 2015ರ ಜುಲೈ ನಡುವೆ ಕಿಯೊನಿಕ್ಸ್‌ ಬೇರೆ ಇಲಾಖೆಗಳಿಗೆ ಕೊಟ್ಟಿದೆ.

ಉದ್ಯೋಗ ಮತ್ತು ತರಬೇತಿ ಇಲಾಖೆ ಕಿಯೊನಿಕ್ಸ್‌ ಜೊತೆ ಒಪ್ಪಂದ ಮಾಡಿಕೊಳ್ಳುವ ಮುನ್ನ ಮಾರುಕಟ್ಟೆ ದರಗಳ ಬಗ್ಗೆ ಮಾಹಿತಿ ಪಡೆದಿದ್ದರೆ ₹ 38.63 ಲಕ್ಷ ಉಳಿಸಬಹುದಿತ್ತು ಎಂದೂ ಅಭಿಪ್ರಾಯಪಟ್ಟಿದೆ.

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಸವರಾಜ್‌ ಸರ್ಕಾರಕ್ಕೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.