ADVERTISEMENT

ಬರ: ಪ್ರತಿ ತಾಲೂಕಿಗೆ 25 ಲಕ್ಷ ಕೊಡಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2012, 19:30 IST
Last Updated 8 ಏಪ್ರಿಲ್ 2012, 19:30 IST

ಬೆಂಗಳೂರು: ಬರಪೀಡಿತ ಪ್ರದೇಶಗಳಲ್ಲಿ ಕೊಳವೆ ಬಾವಿಗಳನ್ನು ದುರಸ್ತಿ ಮಾಡಲು ಮತ್ತು ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಪ್ರತಿ ತಾಲ್ಲೂಕಿಗೆ ತಲಾ 25 ಲಕ್ಷ ರೂಪಾಯಿ ಬಿಡುಗಡೆ ಮಾಡುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ಪತ್ರ ಬರೆದಿದ್ದಾರೆ.

ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಬೆಂಗಳೂರಿಗೆ ಹಿಂತಿರುಗಿದ ನಂತರ ಮುಖ್ಯಮಂತ್ರಿಗಳಿಗೆ ಆರು ಪುಟಗಳ ಪತ್ರ ಬರೆದಿರುವ ಅವರು, ಕೇಂದ್ರದ ನೆರವಿಗೆ ಕಾಯದೆ ಅವಶ್ಯಕತೆ ಇರುವ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಅಪೂರ್ಣಗೊಂಡಿರುವ ಕುಡಿಯುವ ನೀರಿನ ಯೋಜನೆಗಳಿಗೆ, ಗೋಶಾಲೆ, ಗಂಜಿ ಕೇಂದ್ರಗಳಿಗೆ ಹಾಗೂ ಇತರ ಅವಶ್ಯಕ ವಸ್ತುಗಳ ಪೂರೈಕೆಗೆ ಬೇಕಾಗುವ ಹಣವನ್ನು ಬಿಡುಗಡೆ ಮಾಡಬೇಕು. ಅಲ್ಲದೆ ಕೆರೆಗಳಲ್ಲಿ ಹೂಳು ತೆಗೆಯಲು ಪ್ರತಿ ಜಿಲ್ಲೆಗೆ ಕನಿಷ್ಠ ಐದು ಕೋಟಿ ರೂಪಾಯಿ ನೀಡಬೇಕು ಎಂದು ಕೋರಿದ್ದಾರೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಕೇಂದ್ರ ಸರ್ಕಾರ 400 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡದಿರುವುದೇ ಇದಕ್ಕೆ ಕಾರಣ. ಹಣ ಬಿಡುಗಡೆಗೆ ಕೇಂದ್ರದ ಮೇಲೆ ಒತ್ತಡ ಹೇರುವುದರ ಜೊತೆಗೆ, ರಾಜ್ಯ ಸರ್ಕಾರ ತಕ್ಷಣ 200 ಕೋಟಿ ರೂಪಾಯಿ ಬಿಡುಗಡೆ ಮಾಡುವ ಮೂಲಕ ಕಾಮಗಾರಿಗಳು ಆರಂಭವಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ, ಪ್ರತಿ ಜಿಲ್ಲೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚಿಸಬೇಕು. ಈ ತಂಡವು ಬರ ಪರಿಹಾರದ ಬಗ್ಗೆ ತೆಗೆದುಕೊಂಡ ಕ್ರಮಗಳು ಮತ್ತು ಬೇಡಿಕೆಗಳ ಬಗ್ಗೆ ಪ್ರತಿನಿತ್ಯ ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕು ಎಂದು ಸಲಹೆ ಮಾಡಿದ್ದಾರೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅವಶ್ಯಕತೆ ಇರುವ ಕೊಳವೆ ಬಾವಿಗಳನ್ನು ಕೊರೆಸಲು ಸ್ಥಳೀಯ ಅಧಿಕಾರಿಗಳಿಗೆ ಅಧಿಕಾರ ನೀಡಬೇಕು. ಪ್ರತಿ ತಾಲ್ಲೂಕಿಗೆ 10-15 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ವ್ಯವಸ್ಥೆ ಮಾಡಬೇಕು. ಕೆಲವು ಹಳ್ಳಿಗಳಲ್ಲಿ ನೀರಿನ ಕೊರತೆ ಜೊತೆಗೆ ಆಹಾರ ಧಾನ್ಯಗಳ ಅಭಾವವಿದೆ. ಆದ್ದರಿಂದ ಗಂಜಿ ಕೇಂದ್ರಗಳನ್ನು ತೆರೆಯಬೇಕು ಎಂದು ಆಗ್ರಹಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.