ADVERTISEMENT

ಬಹ್ರೇನ್‌ನಿಂದ ಬಂದಿದ್ದ ಮತದಾರ !

​ಪ್ರಜಾವಾಣಿ ವಾರ್ತೆ
Published 12 ಮೇ 2018, 19:30 IST
Last Updated 12 ಮೇ 2018, 19:30 IST

ಶಿರಸಿ: ಸುಮಾರು 4,200 ಕಿ.ಮೀ ದೂರದ ಬಹ್ರೇನ್‌ನಲ್ಲಿ ಉದ್ಯೋಗಿಯಾಗಿರುವ ತಾಲ್ಲೂಕಿನ ಗೌಡಳ್ಳಿಯ ಕಿರಣಕುಮಾರ್ ಉಪಾಧ್ಯಾಯ ಅವರು ಶನಿವಾರ ಇಲ್ಲಿನ ಗೌಡಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

‘ನಾನು ಬಹ್ರೇನ್‌ಗೆ ಹೋಗಿದ್ದರಿಂದ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ. ಇದನ್ನು ತಿಳಿದು, ಹೊಸ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಸೇರ್ಪಡೆಗೊಳಿಸಿಕೊಂಡೆ. ಹೀಗಾಗಿ, ಈ ಬಾರಿ ಮತದಾನ ಮಾಡಲು ಸಾಧ್ಯವಾಯಿತು. ಮತದಾನ ಮಾಡಿದಾಗ ಮಾತ್ರ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ನೈತಿಕ ಹಕ್ಕು ಬರುತ್ತದೆ. ಅನಿವಾಸಿ ಭಾರತೀಯರಿಗೆ ಸರ್ಕಾರಗಳು ಹಲವಾರು ಸೌಲಭ್ಯಗಳನ್ನು ನೀಡಿವೆ. ಆ ಕೃತಜ್ಞತೆಯಿಂದಲಾದರೂ, ಮತ ಹಾಕಬೇಕು ಅನ್ನಿಸಿತ್ತು’ ಎಂದು ಅಲ್ಲಿನ ಕನ್ನಡ ಸಂಘದ ಕಾರ್ಯದರ್ಶಿಯೂ ಆಗಿರುವ ಅವರು ಪ್ರತಿಕ್ರಿಯಿಸಿದರು.

ಶುಕ್ರವಾರ ವಿಮಾನದಲ್ಲಿ ಹೊರಟು, ಶನಿವಾರ ಬೆಳಿಗ್ಗೆ ಬೆಂಗಳೂರು ತಲುಪಿ, ಅಲ್ಲಿಂದ ಸ್ನೇಹಿತನ ಕಾರನ್ನು ಪಡೆದು ಸ್ವತಃ ಅವರೇ ವಾಹನ ಚಲಾಯಿಸಿಕೊಂಡು ಬಂದು, ಮತ ಹಾಕಿದ್ದಾರೆ. ‘ಇದು ನಮಗೆ ಹೆಮ್ಮೆ ಮೂಡಿಸಿದೆ’ ಎಂದು ಗೌಡಳ್ಳಿಯ ನರೇಶ ಭಟ್ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.