ADVERTISEMENT

ಬಾಲ್ಯ ವಿವಾಹ ಆದರೂ ಧೀರ ಹೋರಾಟ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 16:30 IST
Last Updated 21 ಫೆಬ್ರುವರಿ 2011, 16:30 IST

ಶಹಾಪುರ: ಬಾಲ್ಯವಿವಾಹದ ಸಂಕೋಲೆಯಲ್ಲಿ ಸಿಕ್ಕಿದ ಯುವತಿ ಪತಿಯಿಂದ ತಿರಸ್ಕೃತಳಾದರೂ ಧೃತಿಗೆಡದೆ ಸತತ ಏಳು ವರ್ಷಗಳ ಕಾನೂನು ಸಮರ ನಡೆಸಿ ಜಯ ಸಾಧಿಸಿದ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.

ಹದಿಮೂರನೇ ವಯಸ್ಸಿನಲ್ಲೇ ವಿವಾಹಬಂಧನಕ್ಕೆ ಒಳಗಾಗಿ ಕೌಟುಂಬಿಕ ಸಂಕಷ್ಟಗಳನ್ನು ಎದುರಿಸಿ, ಪತಿಯಿಂದ ತಿರಸ್ಕೃತಳಾದ ಸುನೀತಾ ಸ್ಥಳೀಯ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಲೇರಿ ಜಯ ಸಾಧಿಸಿದ ಧೀರ ಮಹಿಳೆ.

ಪತಿ ಮನೆಯಿಂದ ಹೊರಹಾಕಿದಾಗ ಜೀವನಾಂಶ ಕೋರಿ ಸುನೀತಾ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿದಾರಳು ಅಪ್ರಾಪ್ತ ವಯಸ್ಸಿನವಳು ಎನ್ನುವ ಕಾರಣಕ್ಕೆ ಆಕೆಯ ವಿವಾಹವನ್ನು ಸ್ಥಳೀಯ ಕೋರ್ಟ್ ಪುರಸ್ಕರಿಸಿರಲಿಲ್ಲ.

ದಾಂಪತ್ಯ ಜೀವನ ಪುನರ್ ಪ್ರಾಪ್ತಿಗಾಗಿ ಸಿವಿಲ್ (ಹಿರಿಯ ಶ್ರೇಣಿ) ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಸುನಿತಾಳಿಗೆ ಮದುವೆ ಹಾಗೂ ಸಂಪ್ರದಾಯವನ್ನು ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಹಂತದಲ್ಲೂ ಈಕೆಯ ಅರ್ಜಿ ವಜಾ ಆಗಿತ್ತು.

ಧೀರ ಮಹಿಳೆ ಛಲ ಬಿಡದೇ ಹೈಕೋರ್ಟ್ ಕಟ್ಟೆ ಹತ್ತಿದಳು. “ನಾನು ಸುನೀತಾಳನ್ನು ವಿವಾಹವೇ ಆಗಿಲ್ಲ. ಬಾಲ್ಯವಿವಾಹ ಕಾನೂನು ಸಮ್ಮತವಲ್ಲ. ಮಗು ನನ್ನದಲ್ಲ” ಎಂದು ಆಕೆಯ ಪತಿ ಭೀಮರಾಯ ವಾದ ಮಂಡಿಸಿದ್ದರು. ಈ ವಾದವನ್ನು ರಾಜ್ಯ ಹೈಕೋರ್ಟಿನ ಗುಲ್ಬರ್ಗ ಸಂಚಾರಿ ಪೀಠದ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ಮತ್ತು ಬಿ.ಮನೋಹರ ಅವರನ್ನೊಳಗೊಂಡ ವಿಭಾಗೀಯ ಪೀಠ ತಿರಸ್ಕರಿಸಿ ಅರ್ಜಿದಾರಳ ಪರ ತೀರ್ಪು ನೀಡಿದೆ.

“ಬಾಲ್ಯವಿವಾಹ ಕಾನೂನು ಸಮ್ಮತವಲ್ಲ ಹಾಗೂ ಹುಟ್ಟಿದ ಮಗು ತನ್ನದಲ್ಲ ಎಂದು ಪ್ರತಿವಾದಿ ವಾದಿಸುವುದಾದರೆ ಅಪ್ರಾಪ್ತ ಬಾಲಕಿಯ ಮೇಲೆ ಬಲತ್ಕಾರದ ಸಂಭೋಗ ನಡೆದಿದ್ದೆಂದು ಪರಿಗಣಿಸಿ ಅತ್ಯಾಚಾರ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ” ಎಂದು ನ್ಯಾಯಪೀಠ ಮಹತ್ವದ ತೀರ್ಪು ನೀಡಿದೆ.

ಹಿನ್ನೆಲೆ: ಶಹಾಪುರದ ಸುನೀತಾ (13) ಎಂಬಾಕೆಯ ವಿವಾಹ ವಿಭೂತಿಹಳ್ಳಿಯ ಭೀಮರಾಯ ನಾಯ್ಕೋಡಿ ಎಂಬುವವರ ಜೊತೆ 1999ರ ಜೂನ್ 24ರಂದು ನಡೆದಿತ್ತು. ಆಗ ಇಬ್ಬರೂ ವಿದ್ಯಾರ್ಥಿಗಳು. ವಿವಾಹವಾಗಿ ಎರಡು ವರ್ಷದಲ್ಲಿ ಸುನೀತಾ ಪದ್ಮಾವತಿ ಎಂಬ ಹೆಣ್ಣು ಮಗುವಿನ ತಾಯಿಯಾದಳು.

ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಭೀಮರಾಯ ಪತ್ನಿಯನ್ನು ಮನೆಯಿಂದ ಹೊರ ಹಾಕಿದ. ಸುನೀತಾ 2004ರಲ್ಲಿ ಸ್ಥಳೀಯ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಜೀವನಾಂಶ ಕೋರಿ ಪತಿಯ ವಿರುದ್ಧ ಅರ್ಜಿ ಸಲ್ಲಿಸಿದರು. ಮಗಳು ಪದ್ಮಾವತಿಗೂ ಪಾಲು ನೀಡುವಂತೆ ಹಾಗೂ ಪತಿ ಎರಡನೇ ಮದುವೆಯಾಗದಂತೆ ನಿರ್ದೇಶಕ ನೀಡುವಂತೆ ಕೋರಿದ್ದರು. ಅಪ್ರಾಪ್ತ ವಯಸ್ಸಿನ ಸುನೀತಾ ಹಾಗೂ ಮಗಳು ಪದ್ಮಾವತಿಗೆ ಕಾನೂನು ಸಮ್ಮತವಾಗಿ ಜೀವನಾಂಶ, ಆಸ್ತಿಯಲ್ಲಿ ಪಾಲು ನೀಡಲು ಸಾಧ್ಯವಿಲ್ಲ ಎಂದು ಹೇಳಿ ಜೆಎಂಎಫ್‌ಸಿ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.

ಇದರಿಂದ ಆಘಾತಕ್ಕೊಳಗಾಗದ ಸುನಿತಾ ಹೈಕೋರ್ಟ್ ಕದ ತಟ್ಟಿದಳು. 2008ಕ್ಕೆ ಸುನಿತಾಳಿಗೆ 18 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾನೂನುಬದ್ಧ ಹಕ್ಕುಗಳನ್ನು ಪಡೆಯಲು ಅರ್ಹರಾಗಿದ್ದಾರೆ. ನ್ಯಾಯಸಮ್ಮತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಲು ಸೂಚನೆ ನೀಡುವಂತೆ ಹೈಕೋರ್ಟ್ ನಿದೇರ್ಶನ ನೀಡಿತು. ಇವೆಲ್ಲವೂ ವಿಚಾರಣೆ ಹಂತದಲ್ಲಿದೆ ಎಂದು ಅರ್ಜಿದಾರರ ವಕೀಲ ಆರ್.ಎಂ.ಹೊನ್ನಾರಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ದಾಂಪತ್ಯ ಜೀವನ ಪುನರ್ ಪ್ರಾಪ್ತಿಗಾಗಿ ಸಿವಿಲ್ (ಹಿರಿಯ ಶ್ರೇಣಿ) ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾಗ ಕೆಳ ಹಂತ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತು. ಮತ್ತೆ ಸುನೀತಾ ನೀಡಿದ ಮೇಲ್ಮನವಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, “ಹುಟ್ಟಿದ ಮಗುವಿಗೆ ಪಾಲುಗಾರಿಕೆ ನಿರಾಕರಿಸುವಂತಿಲ್ಲ” ಎಂದು ಉಲ್ಲೇಖಿಸಿ ಭೀಮರಾಯನ ವಿರುದ್ಧ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ದಾಖಲಿಸಲು ಅವಕಾಶ ಕಲ್ಪಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.