ನವದೆಹಲಿ: ದೆಹಲಿ ವಿಧಾನಸಭೆಯಲ್ಲಿ ಅಗತ್ಯ ಬಹುಮತ ಪಡೆಯಲು ವಿಫಲವಾಗಿರುವ ಭಾರತೀಯ ಜನತಾ ಪಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆತರುವ ಕುರಿತು ಗೊಂದಲಕ್ಕೆ ಸಿಕ್ಕಿದೆ.
ವಿಧಾನಸಭೆ ಚುನಾವಣೆ ಫಲಿತಾಂಶ ವಿಶ್ಲೇಷಣೆ ಮಾಡಲು ಕಳೆದ ವಾರ ದೆಹಲಿಯಲ್ಲಿ ಸೇರಿದ್ದ ಹಿರಿಯ ಬಿಜೆಪಿ ನಾಯಕರ ಸಭೆಯಲ್ಲಿ ಯಡಿಯೂರಪ್ಪ ಅವರನ್ನು ಮರಳಿ ಕರೆತರುವ ಕುರಿತು ಒಮ್ಮತಾಭಿಪ್ರಾಯ ಮೂಡಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ದೆಹಲಿ ಚುನಾವಣೆ ನೈತಿಕ ರಾಜಕಾರಣಕ್ಕೆ ನಾಂದಿ ಹಾಡಿದೆ. ಅನೇಕ ಹಗರಣಗಳ ವಿರುದ್ಧ ದನಿ ಎತ್ತಿದ ‘ಆಮ್ ಆದ್ಮಿ ಪಕ್ಷ’ (ಎಎಪಿ) ಪರ್ಯಾಯ ರಾಜಕೀಯ ಶಕ್ತಿಯಾಗಿ ರೂಪುಗೊಂಡಿದೆ. ಈ ಹಂತದಲ್ಲಿ ಯಡಿಯೂರಪ್ಪ ಅವರನ್ನು ಮರಳಿ ಬಿಜೆಪಿಗೆ ಕರೆತಂದರೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಪಕ್ಷಕ್ಕೆ ನೈತಿಕ ಹಿನ್ನಡೆ ಆಗಬಹುದೆಂದು ಕೆಲವರು ಪ್ರತಿಪಾದಿಸಿದ್ದಾರೆ.
ಯಡಿಯೂರಪ್ಪನವರ ಮೇಲೂ ಭ್ರಷ್ಟಾಚಾರದ ಆರೋಪಗಳಿರುವಾಗ ಅವರನ್ನು ಕರೆತರುವುದು ಎಷ್ಟು ಸರಿ ಎಂದು ಕೆಲವು ಮುಖಂಡರು ನೇರವಾಗಿ ಪ್ರಶ್ನಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಂದರೆ ಕರ್ನಾಟಕದಲ್ಲಿ ಲಾಭ ಆಗಬಹುದು. ಆದರೆ, ಬೇರೆ ರಾಜ್ಯಗಳಲ್ಲಿ ಉತ್ತರ ಕೊಡುವುದು ಕಷ್ಟವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.
ಸಂಸತ್ ಅಧಿವೇಶನದ ಬಳಿಕ ಯಡಿಯೂರಪ್ಪ ಮರು ಸೇರ್ಪಡೆ ಕುರಿತು ತೀರ್ಮಾನ ಮಾಡುವುದಾಗಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ರಾಜ್ಯದ ಮುಖಂಡರಿಗೆ ಭರವಸೆ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಏನಾದರೂ ತೀರ್ಮಾನ ಆಗಬಹುದು ಎಂದು ಮೂಲಗಳು ಹೇಳಿವೆ.
ಮಾಜಿ ಮುಖ್ಯಮಂತ್ರಿ ಮರು ಸೇರ್ಪಡೆಗೆ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ ಮತ್ತು ಸುಷ್ಮಾ ಸ್ವರಾಜ್ ವಿರೋಧ ಮಾಡುತ್ತಿದ್ದಾರೆ. ಅಕಸ್ಮಾತ್ ಅವರನ್ನು ಕರೆತರುವ ತೀರ್ಮಾನ ಮಾಡಿದರೆ ಅಡ್ವಾಣಿ ಅವರ ಮನವೊಲಿಕೆಗೆ ಮಾಜಿ ಅಧ್ಯಕ್ಷ ನಿತಿನ್‌ಗಡ್ಕರಿ ಅವರನ್ನು ಕಳುಹಿಸಲಿದ್ದಾರೆ. ಹಿರಿಯ ನಾಯಕನ ಮನವೊಲಿಸಲು ಗಡ್ಕರಿ ಅವರೂ ಒಪ್ಪಿದ್ದಾರೆ.
ರಾಜ್ಯ ಬಿಜೆಪಿ ಯಡಿಯೂರಪ್ಪನವರ ಸೇರ್ಪಡೆಗೆ ಹಸಿರು ನಿಶಾನೆ ತೋರಿದೆ. ಈ ವಿಷಯದಲ್ಲಿ ವಿಳಂಬವಿಲ್ಲದೆ ತೀರ್ಮಾನ ಮಾಡುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಈಚೆಗೆ ವರಿಷ್ಠರನ್ನು ಭೇಟಿ ಮಾಡಿ ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.
‘ಯಡಿಯೂರಪ್ಪ ಅವರನ್ನು ಸೇರಿಸಿಕೊಳ್ಳುವುದಕ್ಕೆ ನನ್ನ ವಿರೋಧವಿಲ್ಲ. ಆದರೆ, ಅಡ್ವಾಣಿ ಮನವೊಲಿಕೆಗೆ ನಾನು ಹೋಗಲಾರೆ’ ಎಂದು ಅನಂತ ಕುಮಾರ್ ಸೂಚ್ಯವಾಗಿ ರಾಜನಾಥ್ ಅವರಿಗೆ ಹೇಳಿದ್ದಾರೆ. ಹಿರಿಯ ನಾಯಕರ ಬಳಿ ಮಾಜಿ ಮುಖ್ಯಮಂತ್ರಿ ವಿಷಯ ಪ್ರಸ್ತಾಪಿಸಲು ಬಿಜೆಪಿ ಪ್ರಧಾನ ಕಾರ್ಯದರ್ಶಿ ಭಯ ಬೀಳುತ್ತಿದ್ದಾರೆಂದು ಮೂಲಗಳು ವಿವರಿಸಿವೆ.
ಈ ಮಧ್ಯೆ, ಕೆಎಲ್‌ಇ ಸಂಸ್ಥೆಯ ಚಿನ್ನದ ಹಬ್ಬದ ಸಮಾರಂಭದಲ್ಲಿ ಭಾಗವಹಿಸಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ 21ರಂದು ಬೆಳಗಾವಿಗೆ ಹೋಗುತ್ತಿದ್ದಾರೆ. ಅವರನ್ನು ಕರೆದೊಯ್ಯಲು ಪ್ರಹ್ಲಾದ ಜೋಶಿ ಗುರುವಾರ ಅಹಮದಾಬಾದ್‌ಗೆ ತೆರಳಿದ್ದಾರೆ. ಈ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಬಿಜೆಪಿ ಸೇರ್ಪಡೆ ಕುರಿತು ಚರ್ಚೆ ಆಗುವ ಸಾಧ್ಯತೆಯಿದೆ.
ಯಡಿಯೂರಪ್ಪ ಬಿಜೆಪಿಗೆ ಮರಳಲು ತುದಿಗಾಲಲ್ಲಿ ನಿಂತಿದ್ದರೂ ಹಲವು ಷರತ್ತುಗಳನ್ನು ಹಾಕಿದ್ದಾರೆ. ವಿರೋಧ ಪಕ್ಷ ನಾಯಕನ ಸ್ಥಾನ ಕೊಡಬೇಕು. ಲೋಕಸಭೆಗೆ ಶೋಭಾ ಕರಂದ್ಲಾಜೆ, ರಾಘವೇಂದ್ರ ಮತ್ತು ಶಿವಕುಮಾರ್ ಉದಾಸಿ ಅವರಿಗೆ ಟಿಕೆಟ್ ಕೊಡಬೇಕು. ವಿಧಾನ ಪರಿಷತ್ ಸದಸ್ಯ ಲೇಹರ್ ಸಿಂಗ್, ಧನಂಜಯ ಕುಮಾರ್ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡಬೇಕು ಎನ್ನುವುದು ಪ್ರಮುಖ ಷರತ್ತುಗಳಾಗಿವೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.