ADVERTISEMENT

‘ಬಿಜೆಪಿ ಮನಸ್ಥಿತಿ ಹಲ್ಲೆಗೆ ಕಾರಣ’

ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಕಿಡಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 19:30 IST
Last Updated 10 ಮಾರ್ಚ್ 2018, 19:30 IST
‘ಬಿಜೆಪಿ ಮನಸ್ಥಿತಿ ಹಲ್ಲೆಗೆ ಕಾರಣ’
‘ಬಿಜೆಪಿ ಮನಸ್ಥಿತಿ ಹಲ್ಲೆಗೆ ಕಾರಣ’   

ಬೆಂಗಳೂರು: ‘ಮಹತ್ಮಾಗಾಂಧಿ ಹಂತಕ ನಾಥೂರಾಂ ಗೋಡ್ಸೆ ಸಂತತಿಯವರಾದ ಬಿಜೆಪಿಯವರಿಂದ ದೇಶಭಕ್ತಿ ಕಲಿಯುವ ಅಗತ್ಯ ಇಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಕಿಡಿಕಾರಿದರು.

‘ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಆರೋಪಿ ರಾಜಸ್ಥಾನದ ತೇಜರಾಜ್‌ ತಲೆಯಲ್ಲಿ ದ್ವೇಷ, ಅಸೂಯೆ ತುಂಬಿಕೊಂಡಿದೆ. ಆ ಆರೋಪಿಯ ಮಾನಸಿಕ ಸ್ಥಿತಿಗೆ ಬಿಜೆಪಿ ಕಾರಣ’ ಎಂದು ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

‘ಗುಜರಾತ್‌ ಮತ್ತು ಕರ್ನಾಟಕ ಅಭಿವೃದ್ಧಿ ಮಾದರಿಗಳನ್ನು ಮುಂದಿಟ್ಟು ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ. ನಾನ ಸಿದ್ಧ’ ಎಂದು ಸವಾಲು ಹಾಕಿದ ಅವರು, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಭ್ರಷ್ಟಾಚಾರ ಬಗ್ಗೆ ಮಾತಾಡುತ್ತಾರೆ. ಆದರೆ, ಅವರ ಪುತ್ರ ಜೈ ಶಾ ಆಸ್ತಿ ಒಂದೇ ವರ್ಷದಲ್ಲಿ ಊಹೆಗೂ ನಿಲುಕದಷ್ಟು ಹೆಚ್ಚಳವಾಗಿರುವ ಕುರಿತು ಏನೂ ಹೇಳುತ್ತಿಲ್ಲವಲ್ಲ ಎಂದರು.

ADVERTISEMENT

‘ಬಿಜೆಪಿ ರಾಜ್ಯಗಳಲ್ಲಿ ನಡೆಯುತ್ತಿರುವ ಅನಾಚಾರಗಳ ಬಗ್ಗೆ ಪ್ರಧಾನಿ ಮೌನ ವಹಿಸಿದ್ದಾರೆ ಏಕೆ. ರಾಜ್ಯ ಸರಕಾರವನ್ನು ಕಮಿಷನ್‌ ಸರ್ಕಾರ ಎಂದು ಪ್ರಧಾನಿ ಆರೋಪಿಸಿದ್ದಾರೆ. ಎಲ್ಲ ತನಿಖಾ ಸಂಸ್ಥೆಗಳು ಕೇಂದ್ರದ ಅಧೀನದಲ್ಲಿವೆ. ಎಷ್ಟು ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಪ್ರಧಾನಿ ತನಿಖೆ ಮಾಡಿಸಲಿ’ ಎಂದೂ ಸವಾಲು ಹಾಕಿದರು.

‘ಲೋಕಾಯುಕ್ತರ ಮೇಲೆ ಹಲ್ಲೆಯಾದಾಗ ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕಾಲದಲ್ಲಿ ಕಾನೂನು ಸುವ್ಯವಸ್ಥೆ ಹೇಗಿತ್ತು. ಶಾ, ಗುಜರಾತ್ ಗೃಹ ಸಚಿವರಾಗಿದ್ದಾಗ ಏನೇನು ನಡೆದಿತ್ತು’ ಎಂದು ಪ್ರಶ್ನಿಸಿದರು.

‘ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಗೂಂಡಾ ರಾಜ್ಯವೆಂದು ಆರೋಪ ಮಾಡಿದ್ದಾರೆ. ಬಿಜೆಪಿ ಆಡಳಿತದ ಅವಧಿಯಲ್ಲಿ ರೇವ್ ಪಾರ್ಟಿ ನೋಡಿದ್ದೇವೆ. ಚುಂಬನ ದೃಶ್ಯಗಳನ್ನೂ ನೋಡಿದ್ದೇವೆ’ ಎಂದು ಕೆಣಕಿದರು.

‘ಇತ್ತೀಚಿನ ಹಲವು ಚುನಾವಣೆಗಳಲ್ಲಿ ಬಿಜೆಪಿ ಸೋತಿದೆ. ಆ ಪಕ್ಷ ಗೆಲ್ಲುತ್ತಿರುವುದು ಕಾಕತಾಳೀಯವಷ್ಟೇ. ಹಿಂದುತ್ವ ಹೇಳಿಕೊಂಡು ಕರ್ನಾಟಕದಲ್ಲಿ ರಾಜಕೀಯ ಮಾಡಲು ಸಾಧ್ಯವಿಲ್ಲ. ಸಾವರ್ಕರ್ ಅವರ ಸ್ಲೋಗನ್ ಹಿಂದುತ್ವ. ಹಿಂದೂಗಳಿಗೂ ಹಿಂದುತ್ವಕ್ಕೂ ಸಂಬಂಧ ಇಲ್ಲ. ಜನರಿಗೆ ತಪ್ಪು ಸಂದೇಶ ಕೊಟ್ಟು ಕೋಮುಗಲಭೆಗಳಿಗೆ ಬಿಜೆಪಿ ಪ್ರಚೋದನೆ ನೀಡುತ್ತಿದೆ’ ಎಂದು ಕಿಡಿ ಕಾರಿದರು.

‘ಬಿಜೆಪಿ ನಾಯಕರ ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೀವು, ಆರೋಪಗಳನ್ನು ಎದುರಿಸುತ್ತಿರುವ ಅಶೋಕ್ ಖೇಣಿ, ಆನಂದ್ ಸಿಂಗ್ ಅವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡಿರುವುದು ಸರಿಯೇ’ ಎಂದು ಕೇಳಿದ ಪ್ರಶ್ನೆಗೆ, ‘ಅವರಿಬ್ಬರೂ ಪಕ್ಷದ ನಾಯಕತ್ವ ವಹಿಸಿಲ್ಲ. ಅವರ ಮೇಲಿನ ಆರೋಪಗಳು ಕೋರ್ಟಿನಲ್ಲಿವೆ. ಬಿಜೆಪಿ ನಾಯಕತ್ವ ವಹಿಸಿದವರು ಜೈಲಿಗೆ ಹೋಗಿ ಬಂದವರು. ಯಡಿಯೂರಪ್ಪ ಚೆಕ್‌ನಲ್ಲಿ ಲಂಚ ಪಡೆದವರು’ ಎಂದು ಹರಿಪ್ರಸಾದ್‌ ಸಮರ್ಥನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.