ಬೆಂಗಳೂರು: ಪ್ರಭಾವಿ ರಾಜಕಾರಣಿಗಳ ಪಾಲಾಗುತ್ತಿರುವ ಸರ್ಕಾರಿ ಭೂಮಿ ಬಗ್ಗೆ `ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆ~ ನೀಡಿರುವ ವರದಿ ಪ್ರಕಾರ ಏನೂ ಕ್ರಮ ತೆಗೆದುಕೊಳ್ಳದಂತೆ ಅಂದಿನ ಮುಖ್ಯಮಂತ್ರಿ (ಬಿ.ಎಸ್.ಯಡಿಯೂರಪ್ಪ) ಇಲಾಖಾ ಮುಖ್ಯಸ್ಥರಿಗೆ ಪತ್ರ ಬರೆದಿದ್ದಕ್ಕೆ ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ.
`ಗೋಮಾಳ ಜಮೀನನ್ನು ಪರಭಾರೆ ಮಾಡುವ ಮುನ್ನ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಕಾಯ್ದೆಯಲ್ಲಿ ಉಲ್ಲೇಖಗೊಂಡಿದೆ. 35 ವರ್ಷಗಳ ಹಿಂದೆಯೇ ಹೈಕೋರ್ಟ್ ಕೂಡ ತೀರ್ಪು ನೀಡಿದೆ. ಆಯಾ ಜಿಲ್ಲಾಧಿಕಾರಿಗಳು ಪರಭಾರೆ ಕುರಿತ ಮಾಹಿತಿಯನ್ನು ಮೊದಲು ಸೂಚನಾ ಫಲಕದಲ್ಲಿ ಹಾಕಬೇಕು.
ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು. ಕಾಯ್ದೆ, ಕಾನೂನು ಇದ್ದರೂ ಅವುಗಳನ್ನು ಉಲ್ಲಂಘಿಸಲಾಗಿದೆ ಎಂದರೆ ಏನರ್ಥ? ನ್ಯಾಯಾಲಯದ ಆದೇಶವನ್ನು ಸರ್ಕಾರ ಮೀರಲು ಹೇಗೆ ಸಾಧ್ಯ? ಇದು ಒಳ್ಳೆಯ ಬೆಳವಣಿಗೆ ಅಲ್ಲ~ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಚಿಕ್ಕಮಗಳೂರಿನ ಎನ್.ಎನ್. ಮಂಜಯ್ಯ ಎನ್ನುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ.
`ರಾಜ್ಯದಲ್ಲಿ ಸುಮಾರು 12 ಲಕ್ಷ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿರುವ ಬಗ್ಗೆ ಕಾರ್ಯಪಡೆಯ ವಿ.ಬಾಲಸುಬ್ರಮಣಿಯನ್ ಅವರು 2010ರ ನವೆಂಬರ್‌ನಲ್ಲಿ ವರದಿ ನೀಡಿದ್ದರು. ಈ ವರದಿಯ ಮೇಲೆ ಕ್ರಮ ತೆಗೆದುಕೊಳ್ಳಬೇಡಿ ಎಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಕಚೇರಿಯಿಂದ ಸುತ್ತೋಲೆ ಹೊರಡಿಸಲಾಗಿದೆ. ಹೀಗಾಗಿ ಪ್ರಭಾವಿಗಳು ಸರ್ಕಾರಿ ಭೂಮಿಯನ್ನು ಅನುಭವಿಸುವಂತಾಗಿದೆ~ ಎನ್ನುವುದು ಅರ್ಜಿದಾರರ ದೂರು.
`ಚಿಕ್ಕಮಗಳೂರಿನಲ್ಲಿ ಅತ್ಯಧಿಕವಾಗಿ ಭೂಒತ್ತುವರಿ ಆಗಿರುವ ಬಗ್ಗೆ ಕಾರ್ಯಪಡೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂದಿನ ಮುಖ್ಯಮಂತ್ರಿಯೇ ಈ ವಿಷಯದಲ್ಲಿ ಶಾಮೀಲಾಗಿರುವ ಬಗ್ಗೆ ಬಾಲ ಸುಬ್ರಮಣಿಯನ್ ಸಾರ್ವಜನಿಕವಾಗಿಯೇ ಟೀಕೆ ಮಾಡಿದ್ದರು~ ಎಂದು ದೂರಲಾಗಿದೆ. `ಅಷ್ಟೇ ಅಲ್ಲದೇ, ಮೇಲೆ ತಿಳಿಸಿರುವ ಗ್ರಾಮಗಳಲ್ಲಿ ಒತ್ತುವರಿ ಆಗಿರುವ ಬಗ್ಗೆ ಬಂದಿರುವ ಮಾಹಿತಿಯ ಆಧಾರದ ಮೇಲೆ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಹೋಗಿದ್ದರು. ಆಗ, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ, ಪರಿಶೀಲನೆ ನಡೆಸದಂತೆ ಸೂಚನೆ ನೀಡಿದರು. ಇದರಿಂದ ಪರಿಶೀಲನೆ ಕಾರ್ಯ ಸ್ಥಗಿತಗೊಂಡಿತು~ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಚಿಕ್ಕಮಗಳೂರಿನ ಒತ್ತುವರಿದಾರರ ವಿರುದ್ಧ ಶೀಘ್ರದಲ್ಲಿ ಕ್ರಮ ತೆಗೆದುಕೊಂಡು ಆ ಕುರಿತ ಮಾಹಿತಿಯನ್ನು ನಾಲ್ಕು ವಾರಗಳಲ್ಲಿ ನೀಡುವಂತೆ ಸರ್ಕಾರಕ್ಕೆ ಪೀಠ ಆದೇಶಿಸಿದೆ. ವಿಚಾರಣೆಯನ್ನು ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.