ADVERTISEMENT

ಭೂ ಹಗರಣ: ಎಚ್‌ಡಿಕೆ ವಿರುದ್ಧ ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಬೆಂಗಳೂರು: ಬಿಡಿಎ ಸ್ವಾಧೀನಕ್ಕೆ ಪಡೆದು, ನಿವೇಶನ ರಚಿಸಿ ವಿತರಿಸಿದ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಸಿ.ಚನ್ನಿಗಪ್ಪ ಮತ್ತಿತರರ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ಸೋಮವಾರ ಆದೇಶಿಸಿದೆ.

ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರಿನ ಕೆ.ಆರ್.ಪುರ ಸಮೀಪದ ಥಣಿಸಂದ್ರ ಗ್ರಾಮದಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಕುಮಾರಸ್ವಾಮಿ ಅಕ್ರಮವಾಗಿ ಭೂಸ್ವಾಧೀನದಿಂದ ಕೈಬಿಟ್ಟಿದ್ದರು ಎಂದು ಆರೋಪಿಸಿ ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿಯ ಮಹದೇವಸ್ವಾಮಿ ಎಂಬುವರು ನಗರದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಡಿಸೆಂಬರ್ 29ರಂದು ಖಾಸಗಿ ದೂರು ಸಲ್ಲಿಸಿದ್ದರು. ದೂರನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ದೂರಿನಲ್ಲಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ ಫೆಬ್ರುವರಿ 6ರೊಳಗೆ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿಗೆ ಆದೇಶಿಸಿದರು.

ಮಹದೇವಸ್ವಾಮಿ ಸಲ್ಲಿಸಿರುವ ದೂರು ಮತ್ತು ಅದರ ಜೊತೆಗಿರುವ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶರು, ಆರೋಪಗಳು ಮೇಲ್ನೋಟಕ್ಕೆ ಸತ್ಯವೇ ಎಂಬುದರ ಬಗ್ಗೆ ವಿಚಾರಣೆ ನಡೆಸಿದರು. ಬಳಿಕ ದೂರನ್ನು ವಿಚಾರಣೆಗೆ ಸ್ವೀಕರಿಸಿರುವುದಾಗಿ ಪ್ರಕಟಿಸಿದ ಅವರು, ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 156(3)ರ ಪ್ರಕಾರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಿದರು.

ದೂರಿನಲ್ಲಿರುವ ಆರೋಪಗಳೇನು?:
ನಗರದ ನಾಗರಿಕರಿಗೆ ನಿವೇಶನ ಸೌಲಭ್ಯ ಒದಗಿಸಲು ಅರ್ಕಾವತಿ ಬಡಾವಣೆ ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 750 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ಪೈಕಿ ಥಣಿಸಂದ್ರ ಗ್ರಾಮದ ಸರ್ವೆ ನಂಬರ್ `87/4ಬಿ~ನಲ್ಲಿದ್ದ 3.08 ಎಕರೆ ಭೂಮಿಯೂ ಸೇರಿತ್ತು. ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ 58 ನಿವೇಶನಗಳನ್ನು ನಿರ್ಮಿಸಿ, 38 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಫಲಾನುಭವಿಗಳಿಗೆ ಪೂರ್ಣ ಕ್ರಯಪತ್ರವನ್ನೂ ಮಾಡಿಕೊಡಲಾಗಿತ್ತು.

ಈ ಎಲ್ಲ ಬೆಳವಣಿಗೆಗಳ ನಡುವೆ ಆಗಿನ ಅರಣ್ಯ ಸಚಿವ ಚನ್ನಿಗಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು, `ಥಣಿಸಂದ್ರ ಗ್ರಾಮದ ಸರ್ವೆ ನಂಬರ್ 87/4ಬಿನಲ್ಲಿ 3.08 ಎಕರೆ ಭೂಮಿ ಹೊಂದಿರುವ ರವಿಪ್ರಕಾಶ್ ಮತ್ತು ಎ.ವಿ.ಶ್ರೀರಾಮ್ ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ಭೂಮಿಯನ್ನು ಹೊರತುಪಡಿಸಿ ಅವರಿಗೆ ಬೇರಾವುದೇ ಜಮೀನು ಇಲ್ಲ. ಆದ್ದರಿಂದ ಈ ಭೂಮಿಯನ್ನು ಬಿಡಿಎ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕು~ ಎಂದು ಕೋರುತ್ತಾರೆ.

ಕುಮಾರಸ್ವಾಮಿ ಅವರು 2007ರ ಅಕ್ಟೋಬರ್ 3ರಂದು ಚನ್ನಿಗಪ್ಪ ಅವರ ಪತ್ರವನ್ನು ಆಧಾರವಾಗಿಟ್ಟುಕೊಂಡು ಥಣಿಸಂದ್ರದ 3.08 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಆದೇಶ ಮಾಡಿದ್ದಾರೆ. ಈ ಪ್ರಕರಣದಲ್ಲಿ ಭೂಮಿಯ ಮೂಲ ಮಾಲೀಕರಾದ ರವಿಪ್ರಕಾಶ್ ಮತ್ತು ಶ್ರೀನಿವಾಸ್ ತಮ್ಮ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಅರ್ಜಿಯನ್ನೇ ಹಾಕಿಲ್ಲ. ಆದರೆ, ಸಚಿವರೊಬ್ಬರ ಪತ್ರವನ್ನು ಆಧರಿಸಿ ಆದೇಶ ಹೊರಡಿಸಿದ್ದಾರೆ.
 
ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದಕ್ಕೆ ಸಂಬಂಧಿಸಿದ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಮುಂದೆ ವಿಷಯವನ್ನು ಮಂಡಿಸದೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಹದೇವಸ್ವಾಮಿ ದೂರಿನಲ್ಲಿ ಆರೋಪಿಸಿದ್ದಾರೆ.

ಕುಮಾರಸ್ವಾಮಿ ಅವರು ಥಣಿಸಂದ್ರದ 3.08 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಆದೇಶ ಹೊರಡಿಸುವ ಮೂಲಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 34.62 ಕೋಟಿ ರೂಪಾಯಿ ನಷ್ಟ ಉಂಟುಮಾಡಿದ್ದಾರೆ. ಕುಮಾರಸ್ವಾಮಿ ಮತ್ತು ಚನ್ನಿಗಪ್ಪ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಇಂತಹ ಆದೇಶ ಹೊರಡಿಸಿದ್ದಾರೆ.
 
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಕೆಲವೇ ದಿನಗಳ ಮುನ್ನ ಇಂತಹ ಕಾನೂನುಬಾಹಿರ ಆದೇಶ ಹೊರಡಿಸಿದ್ದಾರೆ ಎಂದು ದೂರಿದ್ದಾರೆ.

ಈ ಪ್ರಕರಣದಲ್ಲಿ ಕುಮಾರಸ್ವಾಮಿ, ಚನ್ನಿಗಪ್ಪ, ರವಿಪ್ರಕಾಶ್, ಶ್ರೀರಾಮ್ ಮತ್ತಿತರರ ನಡವಳಿಕೆಗಳು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಭೂಸ್ವಾಧೀನ ಕಾಯ್ದೆಯ ಉಲ್ಲಂಘನೆ ವ್ಯಾಪ್ತಿಯಲ್ಲಿ ಬರುತ್ತವೆ. ದೂರಿನಲ್ಲಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಬೇಕು ಎಂದು ಅವರು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.