ADVERTISEMENT

ಮಲಪ್ರಭಾ ನಾಲೆ ಒಡೆದು ನೀರು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 19:59 IST
Last Updated 19 ಡಿಸೆಂಬರ್ 2012, 19:59 IST
ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಆಯಟ್ಟಿ ಗ್ರಾಮದ ಬಳಿ ಬುಧವಾರ ಬೆಳಗಿನ ಜಾವ ಒಡೆದ ಮಲಪ್ರಭಾ ಬಲದಂಡೆ ಕಾಲುವೆ          						          -ಪ್ರಜಾವಾಣಿ ಚಿತ್ರ
ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಆಯಟ್ಟಿ ಗ್ರಾಮದ ಬಳಿ ಬುಧವಾರ ಬೆಳಗಿನ ಜಾವ ಒಡೆದ ಮಲಪ್ರಭಾ ಬಲದಂಡೆ ಕಾಲುವೆ -ಪ್ರಜಾವಾಣಿ ಚಿತ್ರ   

ಧಾರವಾಡ: ನವಲಗುಂದ ತಾಲ್ಲೂಕಿನ ಶಿರೂರ ಹಾಗೂ ಆಯಟ್ಟಿ ಗ್ರಾಮಗಳ ಮಧ್ಯೆ, 24ನೇ ಕಿ.ಮೀ. ಬಳಿ ಮಲಪ್ರಭಾ ಬಲದಂಡೆ ಕಾಲುವೆಯ `ಅಕ್ವಡಕ್ಟ್' (ನೀರು ಸಾಗಿಸುವ ಸೇತುವೆ) ಬುಧವಾರ ಬೆಳಗಿನ ಜಾವ ಕುಸಿದು ಬಿದ್ದಿದೆ. ಹೀಗಾಗಿ  ತಾತ್ಕಾಲಿಕವಾಗಿ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.

ಕೆಲವು ದಿನಗಳಿಂದ ಇಲ್ಲಿ ನೀರು ಸೋರಿಕೆಯಾಗುತ್ತಿದ್ದರೂ ಮಲಪ್ರಭಾ ಯೋಜನಾ ವಲಯದ ಎಂಜಿನಿಯರ್‌ಗಳು ಇತ್ತ ಗಮನ ಹರಿಸದೆ ಇರುವುದು ಈ ಸಮಸ್ಯೆಗೆ ಕಾರಣ ಎಂದು ಆಯಟ್ಟಿ, ಶಿರೂರ ಗ್ರಾಮಸ್ಥರು ಆರೋಪಿಸಿದ್ದಾರೆ.

ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸುಮಾರು 10 ಮೀಟರ್ ಅಗಲದ`ಅಕ್ವಾಡೆಕ್ಟ್'ನ ಬ್ಲಾಕ್ ಒಡೆದು ಸುಮಾರು 250 ಕ್ಯೂಸೆಕ್‌ನಷ್ಟು ನೀರು ಹಳ್ಳಕ್ಕೆ ನುಗ್ಗಿದೆ. ನಾಲೆ ಒಡೆದು ನೀರು ಹರಿಯುವ ಸಪ್ಪಳ ಕೇಳಿದ ಆಯಟ್ಟಿ ಗ್ರಾಮಸ್ಥರು ಚೀರಾಟ ಆರಂಭಿಸಿದ್ದಾರೆ. ಕೆಲವರು ಬಂದು ನೋಡಿದಾಗ ಕಾಲುವೆ ಒಡೆದಿದ್ದು ಗೊತ್ತಾಗಿದೆ. ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಎಂಜಿನಿಯರ್‌ಗಳು ನವಿಲುತೀರ್ಥದಿಂದ ಕಾಲುವೆಗೆ ಹರಿಯುವ ನೀರನ್ನು ಸ್ಥಗಿತಗೊಳಿಸಿದರು. ಮಧ್ಯಾಹ್ನ 3 ಗಂಟೆಗೆ ಶಿರೂರು ಬಳಿ ಇರುವ ಜಾಕ್‌ವೆಲ್‌ನ ಗೇಟುಗಳನ್ನು ಮುಚ್ಚಿ ಪಕ್ಕದ ತುಪ್ಪರಿ ಹಳ್ಳಕ್ಕೆ ಉಳಿದ ನೀರನ್ನು ಬಿಡಲಾಯಿತು.

ತಕ್ಷಣ ಕೆಲಸ ಆರಂಭವಾದರೂ ಕನಿಷ್ಠ ಒಂದು ವಾರ ನೀರು ಬಿಡಲಾಗುವುದಿಲ್ಲ. ಶಾಶ್ವತ ಪರಿಹಾರ ಒದಗಿಸಬೇಕೆಂದರೆ ತಿಂಗಳುಗಟ್ಟಲೇ ಬೇಕಾಗುತ್ತದೆ ಎಂದು ಎಂಜಿನಿಯರ್‌ಗಳು ಅಂದಾಜಿಸಿದ್ದಾರೆ. ಒಡೆದ ಕಾಲುವೆಯ ಭಾಗವನ್ನು ಪರಿಶೀಲಿಸಿ ವರದಿ ನೀಡಲು ಬೆಂಗಳೂರು ಮೂಲದ `ಸಿವಿಲ್ ಏಡ್ ಟೆಕ್ನೊ ಕ್ಲಿನಿಕ್' ಸಂಸ್ಥೆಯ ತಾಂತ್ರಿಕ ನಿರ್ದೇಶಕ ಸುದರ್ಶನ ಅಯ್ಯಂಗಾರ್ ಅವರು ಇದೇ 20ರಂದು ಗ್ರಾಮಕ್ಕೆ ಆಗಮಿಸಲಿದ್ದು, ರಿಪೇರಿ ಕಾರ್ಯ ಕೈಗೊಳ್ಳಲಾಗುವುದು ಎಂದು ಎಂಆರ್‌ಬಿಸಿಎಲ್‌ನ ಬ್ಯಾಹಟ್ಟಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಇಸ್ಮಾಯಿಲ್ ಖಾನ್ `ಪ್ರಜಾವಾಣಿ'ಗೆ ತಿಳಿಸಿದರು.

ಮಲಪ್ರಭಾ ಯೋಜನಾ ವಲಯ (ಧಾರವಾಡ)ದ ಮುಖ್ಯ ಎಂಜಿನಿಯರ್ ಶರಣಪ್ಪ ಸುಲಗಂಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಲಪ್ರಭಾ ಬಲದಂಡೆ ಕಾಲುವೆ ಒಟ್ಟು 142 ಕಿ.ಮೀ. ಉದ್ದವಿದೆ. ರೈತರ ಒತ್ತಡದ ಹಿನ್ನೆಲೆಯಲ್ಲಿ ಕಳೆದ ನ.30ರಂದು ನೀರು ಬಿಡಲಾಗಿತ್ತು. ಆದರೆ ಕಾರಣಾಂತರಗಳಿಂದ ಅದೇ ದಿನ ರಾತ್ರಿ ನೀರನ್ನು ಸ್ಥಗಿತಗೊಳಿಸಲಾಗಿತ್ತು.

ಮತ್ತೆ ರೈತರ ಹೋರಾಟ ಆರಂಭವಾದದ್ದರಿಂದ ಡಿ.3ರಂದು ಮತ್ತೆ ನೀರನ್ನು ಬಿಡಲಾಗಿತ್ತು. ನಿಗದಿಯಂತೆ ಬರುವ ಜ.5ರ ವರೆಗೆ ಪ್ರತಿದಿನ 1200 ಕ್ಯೂಸೆಕ್‌ನಂತೆ ನೀರು ಬಿಡಬೇಕಿತ್ತು. ಆದರೆ ಕಾಲುವೆ ಒಡೆದು ನೀರು ಪೂರೈಕೆ ಸ್ಥಗಿತಗೊಂಡಿರುವುದರಿಂದ, ಈ ನೀರನ್ನು ನೆಚ್ಚಿ ಬಿತ್ತನೆ ಮಾಡಿರುವ ರೈತರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.