ADVERTISEMENT

ಮಾನ್ಯತೆ ಧಿಕ್ಕರಿಸುವ ಅಧಿಕಾರವಿಲ್ಲ

ಯತೀಶ್ ಕುಮಾರ್ ಜಿ.ಡಿ
Published 4 ಜುಲೈ 2012, 19:30 IST
Last Updated 4 ಜುಲೈ 2012, 19:30 IST

ಬೆಂಗಳೂರು: ಪಶ್ಚಿಮ ಘಟ್ಟಗಳಿಗೆ ಯುನೆಸ್ಕೊ ನೀಡಿರುವ ನೈಸರ್ಗಿಕ ಪಾರಂಪರಿಕ ತಾಣದ ಮಾನ್ಯತೆ  ಪ್ರಶ್ನಿಸಲು ಸಂವಿಧಾನದಡಿ ಅವಕಾಶ ಇಲ್ಲದಿದ್ದರೂ ರಾಜ್ಯ ಸರ್ಕಾರ ವಿರೋಧಿಸುತ್ತಿದೆ.

ಇದಕ್ಕೆ ರಾಜ್ಯ ಸರ್ಕಾರ ನೀಡಿರುವ ಕಾರಣ, `ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಅಭಿಪ್ರಾಯವನ್ನು ಪಡೆಯದೆ ಯುನೆಸ್ಕೊ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಒಪ್ಪಿಗೆ ಪಡೆಯಲಾಗಿದೆ. ಘಟ್ಟಗಳ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎನ್ನುವ ಕಾರಣದಿಂದ ಈ ಮಾನ್ಯತೆ ನಮಗೆ ಬೇಕಿಲ್ಲ~ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.

ಆದರೆ, ಒಕ್ಕೂಟ ವ್ಯವಸ್ಥೆಯ ಆಧಾರವೇ ಸಂವಿಧಾನ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಬಂಧಕ್ಕೆ ಇದೇ ಆಧಾರ. ಕೇಂದ್ರ ಸರ್ಕಾರ ಯಾವ ವಿಚಾರದಲ್ಲಿ ರಾಜ್ಯಗಳ ಆಡಳಿತದಲ್ಲಿ ಮೂಗು ತೂರಿಸಬಹುದು. ರಾಜ್ಯಗಳಿಗೆ ಇರುವ ಅಧಿಕಾರದ ಮಿತಿಯೇನು ಎನ್ನುವುದಕ್ಕೆ ಸಂವಿಧಾನದ ವಿವಿಧ ಪರಿಚ್ಛೇದಗಳಲ್ಲಿ ನಿರ್ದೇಶನವಿದೆ.

ಇದೇ ರೀತಿಯಲ್ಲಿ `ಕೇಂದ್ರ ಹಾಗೂ ರಾಜ್ಯಗಳ ಶಾಸಕಾಂಗ ವಿಚಾರ: ಹಣಕಾಸು ಹೊರತುಪಡಿಸಿ~ ಈ ವಿಷಯದಲ್ಲಿ ವಿದೇಶಾಂಗ ವ್ಯವಹಾರದ ಅಡಿಯಲ್ಲಿ ನೀಡಿರುವ ಸೂಚನೆಗಳನ್ನು ಗಮನಿಸಿದರೆ ಪಶ್ಚಿಮ ಘಟ್ಟಗಳ ಕೆಲ ತಾಣಗಳಿಗೆ ಯುನೆಸ್ಕೊ ಮಾನ್ಯತೆ ನೀಡಿರುವ ವಿಚಾರದಲ್ಲಿ ಕೇಂದ್ರ ಸರ್ಕಾರ ನಡೆದುಕೊಂಡಿರುವ ರೀತಿ ಸಂಪೂರ್ಣವಾಗಿ ನ್ಯಾಯ ಸಮ್ಮತವಾಗಿಯೇ ಇದೆ ಎನ್ನುವುದು ವೇದ್ಯವಾಗುತ್ತದೆ.

* ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಿಂದ ವಿದೇಶಗಳ ಜೊತೆ ನಡೆಸುವ ಎಲ್ಲಾ ರೀತಿಯ ವ್ಯವಹಾರ

* ರಾಜತಾಂತ್ರಿಕ ಸಂಬಂಧ, ವ್ಯಾಪಾರ

* ವಿಶ್ವಸಂಸ್ಥೆ ಜೊತೆಗಿನ ಸಂಬಂಧ

* ಅಂತರರಾಷ್ಟ್ರೀಯ ಸಮ್ಮೇಳನ ಹಾಗೂ ಅಲ್ಲಿ ತೆಗೆದುಕೊಂಡ ನಿರ್ಣಯಗಳ ಜಾರಿ

* ವಿದೇಶಗಳ ಜೊತೆಗಿನ ಒಪ್ಪಂದ

ಈ ಎಲ್ಲಾ ವಿಚಾರಗಳಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಸಂವಿಧಾನದ 253ನೇ ವಿಧಿಯ ಅಡಿಯಲ್ಲಿ ಕೇಂದ್ರವೇ ಉಳಿಸಿಕೊಂಡಿದೆ. ಇದರ ಜೊತೆಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ವಿಚಾರವಾದರೂ ಅಂತರರಾಷ್ಟ್ರೀಯ ಒಪ್ಪಂದ ಅಥವಾ ಅಂತರರಾಷ್ಟ್ರೀಯ ಸಮ್ಮೇಳನದ ನಿರ್ಣಯವನ್ನು ಜಾರಿಗೆ ತರಬೇಕಾದರೆ ಸೂಕ್ತ ಕಾನೂನನ್ನು ರಾಜ್ಯಗಳ ಮೇಲೆ ಹೇರುವ ಅಧಿಕಾರವೂ ಕೇಂದ್ರ ಸರ್ಕಾರಕ್ಕೆ ಇದೆ.

ಮೇಲಿನ ವಿಚಾರವನ್ನು ಪರಿಗಣಿಸಿದರೆ ರಾಜ್ಯದ ಹತ್ತು ಪಶ್ಚಿಮ ಘಟ್ಟಗಳ ತಾಣಗಳಿಗೆ ಯುನೆಸ್ಕೊ ನೀಡಿರುವ ಪಾರಂಪರಿನ ನೈಸರ್ಗಿಕ ತಾಣದ ಮಾನ್ಯತೆಯನ್ನು ತಿರಸ್ಕರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ರಾಜ್ಯದ ಹೇಳಿಕೆಯನ್ನು ಗಮನಿಸಿದರೆ ಯುನೆಸ್ಕೊ ನೀಡಿರುವ ಸೂಚನೆ/ನಿಯಮಗಳನ್ನು ಜಾರಿಗೆ ತರದೆ ಜಾರಿಕೊಳ್ಳಬಹುದು ಎನ್ನುವ ಅನುಮಾನ ಪರಿಸರವಾದಿಗಳಲ್ಲಿ ಮೂಡತೊಡಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ವನ್ಯಜೀವಿ ಮಂಡಲಿಯ ಮಾಜಿ ಸದಸ್ಯರೂ ಆದ ವೈಲ್ಡ್‌ಲೈಫ್ ಫಸ್ಟ್‌ನ ಪ್ರವೀಣ್ ಭಾರ್ಗವ್, `ಪಶ್ಚಿಮ ಘಟ್ಟದ ಕೆಲವು ಪ್ರದೇಶಕ್ಕೆ ಯುನೆಸ್ಕೊ ಮಾನ್ಯತೆ ನೀಡುವ ವಿಚಾರಕ್ಕೆ ಚಾಲನೆ ದೊರಕಿದ್ದೇ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ. ಅವರೇ ಈ ಬಗ್ಗೆ ಮುತುವರ್ಜಿ ವಹಿಸಿದ್ದರು.

ಅವರ ಚಿಂತನೆಗೆ ರಾಜ್ಯದ ಬಿಜೆಪಿ ಮುಖಂಡರು ಗೌರವ ನೀಡಬೇಕು. ಸರ್ಕಾರದ ಹೇಳಿಕೆಯನ್ನು ಗಮನಿಸಿದರೆ ವಾಜಪೇಯಿ ಅವರಿಗೆ ಗೌರವ ದೊರಕುತ್ತಿಲ್ಲ ಅನಿಸುತ್ತದೆ. ಅಭಿವೃದ್ಧಿಗೆ ಪೂರಕವಾಗುವ ಇಂತಹ ಯೋಜನೆಗೆ ರಾಜ್ಯ ಸರ್ಕಾರ ಪೂರಕವಾಗಿ ಸ್ಪಂದಿಸಬೇಕು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.